ವೀರಾಜಪೇಟೆ, ಫೆ. ೧: ಇಲ್ಲಿಗೆ ಸಮೀಪದ ಕದನೂರು ಗ್ರಾಮದಲ್ಲಿ ಜಾಗ ಸಮತಟ್ಟು ಮಾಡಲು ಮಣ್ಣು ತೆಗೆಯುವ ಸಂದರ್ಭ ಬರೆ ಕುಸಿದು ಟಿಪ್ಪರ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಭೀಮನ ಘಂಟಿ ನಿವಾಸಿ ಸಂಗಮೇಶ (೨೭) ಮೃತ ದುರ್ದೈವಿ. ಮಣ್ಣು ಸಾಗಿಸಲು ಹೋದ ಸಂದರ್ಭದಲ್ಲಿ ಮಣ್ಣು ಕುಸಿದಿದೆ. ಈ ವೇಳೆ ಟಿಪ್ಪರ್ ವಾಹನದಲ್ಲಿದ್ದ ಸಂಗಮೇಶ ಬರೆ ಕುಸಿದು ಮೃತಪಟ್ಟಿದ್ದಾರೆ. ಅದೇ ವಾಹನದಲ್ಲಿದ್ದ ಮತ್ತೊಬ್ಬ ಕಾರ್ಮಿಕ ಹರೀಶ್ ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ವೀರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಸಂಗಮೇಶ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮೃತರ ಕುಟುಂಬಸ್ಥರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಲತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.