ಕಣಿವೆ, ಫೆ. ೨೧: ಕಾಡಿನಿಂದ ಆಹಾರ ಅರಸಿ ನಾಡಿಗೆ ತಡರಾತ್ರಿ ಲಗ್ಗೆಯಿಟ್ಟ ನಾಲ್ಕು ಕಾಡಾನೆಗಳ ಹಿಂಡು ಮರುದಿನ ಬೆಳಕು ಹರಿದೊಡನೆ ಕಾಡಿಗೆ ಮರಳಲು ಹರಸಾಹಸ ಪಡುತ್ತಿದ್ದ ಚಿತ್ರಣ ತೊಂಡೂರು ಗ್ರಾಮದಲ್ಲಿ ಕಂಡುಬAತು.
ಗ್ರಾಮದ ಶ್ರೀಕೃಷ್ಣ ದೇವಾಲಯದ ಬಳಿಯ ಕಾಡಂಚಿನಲ್ಲಿ ಸುಮಾರು ಒಂದು ಕಿಮೀ ದೂರಕ್ಕೆ ಕ್ರಮಿಸಿದ ಆನೆಗಳ ಹಿಂಡು ಕಾಡಿಗೆ ಮರಳಲು ಸಾಧ್ಯವಾಗದೇ ಪರದಾಡಿದವು.
ಆನೆಕಾಡು, ತೊಂಡೂರು, ಏಳನೇ ಹೊಸಕೋಟೆ, ಕಂಬಿಬಾಣೆ ವ್ಯಾಪ್ತಿಯಲ್ಲಿ ಅರಣ್ಯದ ಸುತ್ತಲೂ ಅಳವಡಿಸಿರುವ ರೈಲ್ವೆ ಕಂಬಿಗಳ ತಡೆಗೋಡೆ ಅಪೂರ್ಣವಿರುವ ಕಡೆಗಳಿಂದ ದಾಟಿರುವುದಾಗಿ ಹೇಳಲಾಗುತ್ತಿದೆ.
ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಬಿಸಿಲ ಧಗೆ ದಿನೇ ದಿನೇ ಏರುತ್ತಿದೆ. ಕಾಡಿನಲ್ಲಿ ಆಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಂಭವವಿದೆ. ಬೆಂಕಿ ಅವಘಡಗಳು ಸಂಭವಿಸುವ ಪ್ರಮೇಯ ಇರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ. ಹಾಗಾಗಿ ಕಾಡಾನೆಗಳು ನಾಡಿನತ್ತ ದಾಟದಂತೆ ಖಾಲಿ ಇರುವ ಸ್ಥಳಗಳಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.