ಬೆಂಗಳೂರು, ಫೆ. ೨೨: ಮನೆಯ ಮುಂದಿನ ಹೂ ಕುಂಡದಲ್ಲಿ ಗಾಂಜಾ ಬೆಳೆದ ಆರೋಪದ ಸಂಬAಧಿತ ಪ್ರಕರಣದ ವೇಳೆ ಅರ್ಜಿದಾರರ ಪರ ವಕೀಲರು ಶೋಗೆ ಗಾಂಜಾ ಗಿಡ ಹಾಕಿರಬಹುದು. ಬೇರೆ ಗಿಡಗಳ ಜೊತೆ ಅದು ಬಂದಿರಬಹುದು ಎಂಬ ಅಂಶ ಹೈಕೋರ್ಟ್ನಲ್ಲಿ ನಗು ಮೂಡಿಸಿತು.

ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯಿದೆ ಅಡಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಗೋಣಿಕೊಪ್ಪದ ನಿವಾಸಿ ಎ.ಎಂ. ಕಾವೇರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದAತೆ ಅರ್ಜಿದಾರರ ಪರ ವಕೀಲರು ಮನೆಯಲ್ಲಿ ಒಂದು ಕೆಜಿ ಗಾಂಜಾ ಬೆಳೆಯಲಾಗುತ್ತದೆಯೇ? ಅರ್ಧ ಕೆ.ಜಿ. ಮಾತ್ರ ಸಿಕ್ಕಿರುವುದು. ಗಾಂಜಾ ಗಿಡಗಳು ಬೆಳೆದಿರುವ ಜಾಗ ನಮ್ಮದಲ್ಲ, ಬೇರೆಯವರಿಗೆ ಸೇರಿದ್ದಾಗಿದೆ. ನಮಗೆ ಗೊತ್ತಿದ್ದರೆ ನಾವೇಕೆ ಅದನ್ನು ಬೆಳೆಯುತ್ತೇವೆ? ಅದನ್ನು ಯಾರು ಪ್ರತ್ಯೇಕಿಸಿಲ್ಲ. ಶೋಗೆ ಹಾಕಿಕೊಂಡಿರಬಹುದು ಎಂದರು. ಅರ್ಜಿದಾರರ ವಾದಕ್ಕೆ ಪೀಠ ಆಶ್ಚರ್ಯ ವ್ಯಕ್ತಪಡಿಸಿದ ಕಾರಣಕ್ಕೆ ಎಚ್ಚೆತ್ತುಕೊಂಡ ವಕೀಲರು ನಾವು ಹಾಕಿಲ್ಲ. ಬೇರೆ ಗಿಡಗಳ ಜೊತೆ ಅದು ಬೆಳೆದಿರಬಹುದು ಎಂದು ಸಮರ್ಥನೆ ನೀಡಿದರು. ಇದರಿಂದ ನ್ಯಾಯಮೂರ್ತಿಗಳು ಸೇರಿ ಕೋರ್ಟ್ನಲ್ಲಿದ್ದ ವಕೀಲರು ಜೋರಾಗಿ ನಕ್ಕರು.

ಆಗ ಪೀಠವು, ಹೂಕುಂಡದಲ್ಲಿ ಗಾಂಜಾ ಹೇಗೆ ಬಂತು ಹೇಳಿ? ಸ್ವಾಭಾವಿಕವಾಗಿ ಗಾಂಜಾ ಹೇಗೆ ಬೆಳೆಯುತ್ತದೆ? ೧೧ ಗಾಂಜಾ ಗಿಡ ಎಲ್ಲಿಂದ ಬಂತು? ಗಾಳಿಯಿಂದ ಬಂದು ಅಲ್ಲಿ ಬಿದ್ದು ಅದೇ ಬೆಳೆಯಿತೇ? ಗಾಳಿಯಲ್ಲಿ ಗಾಂಜಾ! ನಾಲ್ಕು ಕೆಜಿ ಗಾಂಜಾ ಏನು ಮಾಡಿದಿರಿ? ಹಾಗಾದರೆ, (ನಿಮ್ಮ ಪ್ರಕಾರ) ಕೆನಬೀಸ್ ಬೇರೆ, ಗಾಂಜಾನೇ ಬೇರೆಯೇ! ಎಂದು ಪ್ರಶ್ನೆಯ ಸುರಿಮಳೆಗೈಯಿತು. ವಾದ-ಪ್ರತಿವಾದ ಅಲಿಸಿದ ನ್ಯಾಯಾಲಯವು ಫೆಬ್ರವರಿ ೨ರಂದು ಪ್ರಕರಣಕ್ಕೆ ನೀಡಿದ್ದ ತಡೆಯನ್ನು ವಿಸ್ತರಿಸಿ, ಅರ್ಜಿ ವಿಚಾರಣೆಯನ್ನು ಮಾರ್ಚ್ ೬ಕ್ಕೆ ಮುಂದೂಡಿತು. ಹಣ ಮಾಡುವ ಉದ್ದೇಶದಿಂದ ಗೋಣಿಕೊಪ್ಪದ ನಿವಾಸಿ ಕಾವೇರಪ್ಪ ಅವರು ಮನೆಯ ಹಿಂಭಾಗದ ಪಾಳು ಬಿದ್ದಿರುವ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದಾರೆ ಎಂದು ಆರೋಪಿಸಿ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ರದ್ದುಪಡಿಸುವಂತೆ ಕಾವೇರಪ್ಪ ಕೋರಿದ್ದಾರೆ. - ಕೋವರ್ ಕೊಲ್ಲಿ ಇಂದ್ರೇಶ್