ವೀರಾಜಪೇಟೆ, ಫೆ. ೨೨: ಕ್ರೀಡೆ ದೈಹಿಕ ಆರೋಗ್ಯ ದೊಂದಿಗೆ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಿರಿಯ ಹಾಕಿ ಆಟಗಾರ ಹಾಗೂ ಹಾಕಿ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಹೇಳಿದರು.

ವೀರಾಜಪೇಟೆ ಕಾವೇರಿ ಕಾಲೇಜು ದೈಹಿಕ ಶಿಕ್ಷಣ ವಿಭಾಗದಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದ್ದ ೫ ಎ ಸೈಡ್ ರಿಂಗ್ ಹಾಕಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯು ನಮ್ಮಲ್ಲಿ ಸಾಮರಸ್ಯವನ್ನು ಮೂಡಿಸುವುದರೊಂದಿಗೆ ಒಗ್ಗಟ್ಟಿನಿಂದ ಗುರಿಯನ್ನು ಮುಟ್ಟಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾವೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಪುಟ್ಟಿಚಂಡ ಡಯಾನ ಸೋಮಯ್ಯ, ಈ ರೀತಿಯ ಕ್ರೀಡಾಕೂಟಗಳು ಹೆಚ್ಚು ಹೆಚ್ಚು ಆಯೋಜನೆಯಾದಾಗ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸುವುದರೊಂದಿಗೆ ಕ್ರೀಡೆಯ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲು ಸಹಕಾರಿ ಆಗುತ್ತದೆ ಎಂದರು.

ವೇದಿಕೆಯಲ್ಲಿ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್. ಸಲ್ಡಾನ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ೨೦ ತಂಡಗಳು ಭಾಗವಹಿಸಿದ್ದು, ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗ, ಆಡಳಿತಾತ್ಮಕ ಸಿಬ್ಬಂದಿಗಳು ಹಾಜರಿದ್ದರು.