ಮಡಿಕೇರಿ, ಫೆ. ೨೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೫-೨೬ನೇ ಸಾಲಿನ ಕೈಬುಲಿರ ಬೋಪಯ್ಯ ಜ್ಞಾಪಕಾರ್ಥ ದತ್ತಿ ಕಾರ್ಯಕ್ರಮ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ತಾ. ೨೮ ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.
ದತ್ತಿಯ ಆಶಯದಂತೆ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಏರ್ಪಡಿಸಲಾಗಿದೆ. ಈಗಾಗಲೇ ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಯುವಕವಿ ಜಗದೀಶ್ ಜೋಡುಬೀಟಿ ವಹಿಸಿಕೊಳ್ಳಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಯುವಕವಿಯತ್ರಿ ಕೆ.ಜಿ. ರಮ್ಯಾ ನೆರವೇರಿಸಲಿದ್ದಾರೆ. ಪ್ರಾಸ್ತಾವಿಕವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಲಿದ್ದಾರೆ. ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ದತ್ತಿದಾನಿಗಳಾದ ಕೈಬುಲಿರ ಪಾರ್ವತಿ ಬೋಪಯ್ಯ ಅವರು ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ನಿರ್ಮಲ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಭಾಗವಹಿಸಲಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಕೆ.ಆರ್. ಮನ, ದ್ವಿತೀಯ ಸ್ಥಾನ ಗಳಿಸಿದ ಕೊಟ್ಟಮುಡಿಯ ಮರ್ಕಸ್ ಹಿದಾಯತ್ ಕಾಲೇಜಿನ ಫಹೀನ ಟಿ.ಎ., ತೃತೀಯ ಸ್ಥಾನಗಳಿಸಿದ ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಅನುಷಾ ಪಿ.ಆರ್., ಕುಶಾಲನಗರ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರೇಕ್ಷಾ ಜಿ.ಎಂ. ಇವರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ತಿಳಿಸಿದ್ದಾರೆ.