ನಾಪೋಕ್ಲು, ಫೆ. ೨೭: ಪರೀಕ್ಷೆಗೆ ತಯಾರಾಗುವ ಮುನ್ನ ಮನದಲ್ಲಿರುವ ಭಯವನ್ನು ದೂರವಿಟ್ಟು ಮನನ ಮಾಡಿಕೊಂಡಿರುವ ಪಠ್ಯಗಳನ್ನು ಆತ್ಮವಿಶ್ವಾಸ ಮತ್ತು ದೃಢಮನಸ್ಸಿನಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಉಪನ್ಯಾಸಕಿ ಕೂಡಕಂಡಿ ಸೋನಿ ಸುದೀಪ್ ಸಲಹೆ ನೀಡಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಾಪೋಕ್ಲು ಕೆ.ಪಿ.ಎಸ್ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ದಿ. ಸೂದನ ರಾಘವಯ್ಯ ಮತ್ತು ಬಿ.ಆರ್ ಸಾಯಿನಾಥ್ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರೀಕ್ಷೆ ಹತ್ತಿರ ಬಂದಾಗ ಓದಿನ ಅಭ್ಯಾಸ ಪ್ರಾರಂಭ ಮಾಡದೆ, ಪ್ರತಿನಿತ್ಯವೂ ಆ ದಿನ ಆದ ಪಾಠವನ್ನು ಮನನ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಸಾಧನೆಗೈಯಲು ಸಾಧ್ಯವಿದೆ ಎಂದರು.

ಬಿ.ಆರ್. ಸಾಯಿನಾಥ್ ಅವರ ದತ್ತಿ ಆಶಯದಂತೆ ಕನ್ನಡ ಕವಿ ಕಾವ್ಯ ಪರಿಚಯ ವಿಷಯದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಎಸ್.ಐ ಮುನಿರ್ ಅಹ್ಮದ್ ಮಾತನಾಡಿ, ಪ್ರಾಚೀನ ಕಾಲದಿಂದಲೂ ಮಾನವನ ಮನೋಭೂಮಿಕೆಯಲ್ಲಿ ಮೂಡಿದಂತಹ ಸೌಂದರ್ಯ ಅನುಭೂತಿಯ ಚಟುವಟಿಕೆಯಲ್ಲಿ ಮೂಡಿಬಂದ ಸಾಹಿತ್ಯವೇ ಕಾವ್ಯ. ಯಾವುದೇ ದೇಶದ ಪ್ರಾಚೀನ ಸಾಹಿತ್ಯವನ್ನು ಗಮನಿಸಿದರೆ ಅದು ಕಾವ್ಯರೂಪದಲ್ಲಿ ಬಹಳ ಲಯಾತ್ಮಕವಾಗಿ ಇರುವುದನ್ನು ಕಾಣಬಹುದು. ಕಾಲಕಾಲಕ್ಕೆ ಅದು ಬದಲಾಗುತ್ತಾ ಗದ್ಯರೂಪಕ್ಕೆ ಬಂದು ಸಾಹಿತ್ಯ ರೂಪಕ್ಕೆ ಬಂದಿದೆ. ಕಾವ್ಯವೇ ಸಾಹಿತ್ಯದ ಮೂಲ ಎಂದರು. ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜೊತೆಗೆ ಸಾಹಿತ್ಯ ಇವುಗಳನ್ನು ತಿಳಿಯುವ ಕಡೆಗೆ ಮನಸ್ಸು ಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಸಾಹಿತ್ಯ ಪರಿಷತ್ತು ಸಾಹಿತ್ಯದ ಕೆಲಸಗಳ ಜೊತೆಗೆ ಶೈಕ್ಷಣಿಕ ಸಾಧನೆ ಮಾಡಿದವರನ್ನು ಗುರುತಿಸುತ್ತಾ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಮಾಡುತ್ತಿದೆ. ಜಿಲ್ಲೆಯಲ್ಲಿ ಹತ್ತನೇ ತರಗತಿ ಮತ್ತು ಪದವಿಪೂರ್ವ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ಮಾಡುತ್ತಿದೆ. ಅಲ್ಲದೆ ಪ್ರಾಥಮಿಕ ಶಾಲಾ ವಿಭಾಗದಿಂದ ಹಿಡಿದು ಪದವಿಯವರೆಗಿನ ವಿದ್ಯಾರ್ಥಿಗಳಿಗೆ ಕಥಾಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕವಿಗೋಷ್ಠಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಮಡಿಕೇರಿಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಮುಖ್ಯಮಂತ್ರಿಗಳ ಪದಕವನ್ನು ಪಡೆದಿದ್ದ ದಿ.ಸೂದನ ರಾಘವಯ್ಯ ಅವರ ನೆನಪಿನಲ್ಲಿ ಅವರ ಪುತ್ರಿ ಉಷಾರವಿ ರವರು ೧೦ನೇ ತರಗತಿಯ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯನ್ನು ಸನ್ಮಾನಿಸಬೇಕು ಎಂಬ ಆಶಯದಿಂದ ದತ್ತಿ ಸ್ಥಾಪನೆ ಮಾಡಿದ್ದಾರೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ನಾಪೋಕ್ಲು ಕೆ.ಪಿ.ಎಸ್ ಶಾಲೆಯ ಉಪ ಪ್ರಾಂಶುಪಾಲರಾದ ಎಂ.ಎಸ್ ಶಿವಣ್ಣ ಮಾತನಾಡಿ, ಸಾಹಿತ್ಯ ಪರಿಷತ್ತು ಸಾಹಿತ್ಯವಲ್ಲದೆ ಶೈಕ್ಷಣಿಕವಾಗಿಯೂ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಮಾತನಾಡಿ. ದತ್ತಿ ಕಾರ್ಯಕ್ರಮಗಳನ್ನು ಶಾಲಾ ವಿದ್ಯಾರ್ಥಿಗಳ ಮಟ್ಟದಲ್ಲಿಯೇ ಮಾಡುತ್ತಿದ್ದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮಾಡುವ ಸನ್ಮಾನವನ್ನು ಅವರು ಗಮನಿಸಿ ಅವರು ಕೂಡ ಸಾಧನೆಯ ಹಾದಿಯಲ್ಲಿ ನಡೆಯಲು ಅನುಕೂಲವಾಗಲಿ ಎಂದು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ಹೇಳಿದರು.

೨೦೨೪-೨೫ ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ಸೋಮವಾರಪೇಟೆ ತಾಲೂಕಿನ ನಿಡ್ತ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜೆ ಎಸ್ ಪೂರ್ವಿಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೆರವಂಡ ಉಮೇಶ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ಕೇಟೋಳಿರ ರಾಜ ಗಣಪತಿ, ಸಾಹಿತ್ಯ ಪರಿಷತ್ತಿನ ಸದಸ್ಯೆ ಶಾಂತಿ ಅರ್ಜುನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.