ಸೋಮವಾರಪೇಟೆ, ಫೆ. ೨೭: ಡಾಲ್ಫಿನ್ ಸ್ಪೋರ್ಟ್ಸ್ ಕ್ಲಬ್, ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕ ಸಹಯೋಗದೊಂದಿಗೆ ದಿ. ಬಿ. ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟದಲ್ಲಿ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಡಿಕೇರಿಯ ಚಾಮರ್ಸ್ ಮತ್ತು ಕೂಡಿಗೆಯ ಸ್ಪೋರ್ಟ್ಸ್ ಹಾಸ್ಟೆಲ್ ತಂಡಗಳ ನಡುವೆ ನಡೆದು ಚಾಮರ್ಸ್ ಸೆಮಿಫೈನಲ್ಗೆ ಪ್ರವೇಶಿಸಿತು. ಕೋಣನಕಟ್ಟೆ ಮತ್ತು ಕಕ್ಕಬ್ಬೆ ಮಲ್ಮ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಮ ತಂಡ ಗೆದ್ದು ಸೆಮಿಫೈನಲ್ ಪ್ರವೇಶಿಸಿತು. ಬೊಟ್ಟಿಯತ್ನಾಡ್ ಕುಂದ ಮತ್ತು ಬೆರಳಿನಾಡು ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಬೇರಳಿನಾಡ್ ೭-೨ ಗೋಲು ಗಳಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಡಾಲ್ಫಿನ್ಸ್ ಸೋರ್ಟ್ಸ್ ಕ್ಲಬ್, ಅಂಜಿಗೇರಿನಾಡ್ ತಂಡವನ್ನು ೪-೨ ಗೋಲುಗಳಿಂದ ಸೋಲಿಸಿ ಸೆಮಿಫೈನಲ್ಗೆ ಅರ್ಹತೆ ಗಳಿಸಿಕೊಂಡಿತು. ತಾ. ೨೮ ರಂದು (ಇಂದು) ಮಧ್ಯಾಹ್ನ ಸೆಮಿಫೈನಲ್ ಪಂದ್ಯಾಟ ನಡೆಯಲಿದ್ದು, ಮಾ. ೧ ರಂದು ಫೈನಲ್ ಪಂದ್ಯ ನಡೆಯಲಿದೆ.