ಮಡಿಕೇರಿ, ಫೆ. ೨೭: ಸಹಕಾರ ಸಂಘಗಳು ಪ್ರತಿವರ್ಷ ಕಡ್ಡಾಯವಾಗಿ ಆಡಿಟಿಂಗ್ ಮಾಡಿಸುವ ಮೂಲಕ ಪಾರದರ್ಶಕ ಆಡಳಿತವನ್ನು ನೀಡಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷ ಕೆ.ಪಿ. ಬಾಂಡ್ ಗಣಪತಿ ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಮತ್ತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಸಂಯುಕ್ತ ಆಶ್ರಯದಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಆದಾಯ ತೆರಿಗೆ, ಜಿಎಸ್ಟಿ ಮಾಹಿತಿ ಹಾಗೂ ಪದಾಧಿಕಾರಿಗಳ ಕರ್ತವ್ಯ, ಜವಾಬ್ದಾರಿ ಕುರಿತು ರಾಜ್ಯ ಮಟ್ಟದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ಕೊಡಗು ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ೧೧೫ ವರ್ಷಗಳ ಇತಿಹಾಸವಿದೆ. ಉತ್ತಮ ಸಹಕಾರಿ ಸಂಘಗಳಿರುವ ಹೆಗ್ಗಳಿಕೆಯನ್ನು ಹೊಂದಿರುವ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಮತ್ತು ಮಾದರಿ ಎನಿಸಿದೆ. ಈ ಖ್ಯಾತಿ ಹೀಗೆ ಮುಂದುವರಿಯಬೇಕಾದರೆ ಪಾರದರ್ಶಕ ಆಡಳಿತ ನಡೆಸುವುದು ಮುಖ್ಯ ಎಂದರು.
ಜಿಲ್ಲೆಯಲ್ಲಿರುವ ಒಟ್ಟು ಸಹಕಾರಿ ಸಂಘಗಳಲ್ಲಿ ೧೦೩ ಮಾತ್ರ ಲಾಭದಲ್ಲಿದ್ದು, ಉಳಿದವು ನಷ್ಟದಲ್ಲಿವೆ. ಈ ಹಿಂದೆ ಇದ್ದ ೧೧೫ ದವಸ ಭಂಡಾರಗಳಲ್ಲಿ ಪ್ರಸ್ತುತ ೭೬ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕೆಲವು ಸಹಕಾರ ಸಂಘಗಳು ಮತ್ತು ದವಸ ಭಂಡಾರಗಳು ಆಡಿಟ್ ವರದಿ ನೀಡುವಲ್ಲಿ ವಿಫಲವಾಗಿವೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಕೊಡಗಿನ ಸಹಕಾರಿ ರಂಗಕ್ಕೆ ಕೆಟ್ಟ ಹೆಸರು ಬರಬಹುದು, ಹಿರಿಯರ ಶ್ರಮಕ್ಕೆ ಕುಂದು ಬರಬಹುದು ಎಂದು ಕೆ.ಪಿ. ಗಣಪತಿ ಆತಂಕ ವ್ಯಕ್ತಪಡಿಸಿದರು.
ಆಡಿಟ್ ವರದಿ ನೀಡದ ಆಡಳಿತ ಮಂಡಳಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಮತ್ತು ಸಮರ್ಥ ಆಡಳಿತ ನೀಡಲಾಗದೆ ಅಸಹಾಯಕರಾಗುವವರು ಸಹಕಾರಿ ರಂಗದಲ್ಲಿ ಇರಬಾರದು. ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಕಾಲ ಕಾಲಕ್ಕೆ ಬದಲಾಗುವ ಕಾಯ್ದೆ, ಆದಾಯ ತೆರಿಗೆ ಮತ್ತು ಜಿಎಸ್ಟಿಯ ಮಾಹಿತಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಮಾಹಿತಿಯ ಕೊರತೆ ಎದುರಾದರೆ ಅಧಿಕಾರಿಗಳಿಗೆ ಸಲಹೆಗಳನ್ನು ನೀಡಲು ಮತ್ತು ಆಡಿಟ್ ವರದಿಯ ನ್ಯೂನತೆಗಳನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಟ್ಟಣ ಸಹಕಾರ ಸಂಘ, ದವಸ ಭಂಡಾರ ಸೇರಿದಂತೆ ಸಹಕಾರಿ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಹಕಾರಿ ಕಾಯ್ದೆ ಮತ್ತು ತೆರಿಗೆ ಪದ್ಧತಿಯ ಕುರಿತು ಸಹಕಾರಿಗಳಿಗೆ ಮನದಟ್ಟು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ವೀರಾಜಪೇಟೆಯ ಹಿರಿಯ ಸಹಕಾರಿ ಬಿ.ಬಿ. ನಾಣಯ್ಯ ಮಾತನಾಡಿ, ಸರ್ವ ಸಹಕಾರಿಗಳು ಒಗ್ಗೂಡಿ ಕೊಡಗಿನ ಸಹಕಾರಿ ರಂಗವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಸನ್ನದು ಲೆಕ್ಕಿಗ ಸಿ.ಎ. ಅನಿಲ್ ಭಾರದ್ವಾಜ್ ಅವರು ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆಯ ಕುರಿತು ವಿವರಿಸಿದರು.
ವಿಶೇಷ ಆಹ್ವಾನಿತರಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಉಪಾಧ್ಯಕ್ಷ ಹೆಚ್.ಕೆ. ಮಾದಪ್ಪ, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕರುಗಳಾದ ಕೆ.ಟಿ. ಪರಮೇಶ್, ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಟಿ. ಸುಬ್ಬಯ್ಯ, ಎಂ.ಎA. ಶ್ಯಾಮಲ, ಅಮೃತ್ ವಿ.ಸಿ., ಎಸ್.ಆರ್. ಸುನಿಲ್ ರಾವ್, ಹೆಚ್.ಎಂ. ರಮೇಶ್, ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಡಿ. ರವಿಕುಮಾರ್, ಕೆಐಸಿಎಂನ ಪ್ರಾಂಶುಪಾಲರು ಮತ್ತು ಸಮನ್ವಯಾಧಿಕಾರಿ ಪುಟ್ಟಸ್ವಾಮಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ
ಇದೇ ಸಂದರ್ಭ ವೀರಾಜಪೇಟೆಯ ಹಿರಿಯ ಸಹಕಾರಿ ಬಿ.ಬಿ. ನಾಣಯ್ಯ ಅವರಿಗೆ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.