ಮಡಿಕೇರಿ, ಫೆ. ೨೭: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರೊ ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಮಿತಿ ಸದಸ್ಯರು ಮಾರ್ಚ್ ೧೧ ರಂದು ರಾಜ್ಯ ಸಮಿತಿ ಏರ್ಪಡಿಸಿರುವ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಸಮಿತಿ ಸಂಚಾಲಕರಾದ ಗಾಯತ್ರಿ ನರಸಿಂಹ ಅವರು ಮಾಹಿತಿ ನೀಡಿದರು.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಾರ್ಚ್ ೧೧ ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರು ಚಲೋ ಪ್ರತಿಭಟನೆ ಅಂಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಹಕ್ಕೊತ್ತಾಯಗಳು
೨೦೨೬-೨೭ರ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ SಅSP/ಖಿSP ಶೇ. ೨೪.೧ರಷ್ಟು ಅನುದಾನ ಮೀಸಲಿರಿಸಬೇಕು. SಅSP/ಖಿSP ಯ ರೂ. ೨೫ ಸಾವಿರ ಕೋಟಿ ಹಣ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿzದ್ದ, ಇದನ್ನು ಹಣವನ್ನು ಹಿಂತಿರುಗಿಸಬೇಕು.
ಖಾಲಿ ನಿವೇಶನ(ಖಾಲಿ ಜಾಗ) ಹೊಂದಿರುವ ವಸತಿ ಸೌಲಭ್ಯ ವಂಚಿತರಿಗೆ ವಸತಿ ಮಂಜೂರು ಮಾಡಬೇಕು. ಸ್ವಂತ ನಿವೇಶನ ಹೊಂದಿರದ ವಸತಿ ರಹಿತರಿಗಾಗಿ ಸರ್ಕಾರಿ ಭೂಮಿ ಗುರುತಿಸಬೇಕು. ಸರ್ಕಾರಿ ಭೂಮಿ ಲಭ್ಯವಿರದಿದ್ದರೆ ಖಾಸಗಿ ಭೂಮಿ ಖರೀದಿಸಿ ವಸತಿ ಬಡಾವಣೆ ರಚಿಸಿ ನಿವೇಶನ ಹಂಚಿಕೆ ಮಾಡಬೇಕು. ಇದೂ ಸಾಧ್ಯವಾಗದಿದ್ದಲ್ಲಿ ನಿವೇಶನ ಖರೀದಿಸಲು ಪ್ರತಿ ಕುಟುಂಬಕ್ಕೆ ರೂ.೫ ಲಕ್ಷ ಆರ್ಥಿಕ ನೆರವು ನೀಡಬೇಕು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಪ್ರೊ. ಬಿ.ಕೃಷ್ಣಪ್ಪ ಅವರಿಗೆ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು ಹಾಗೂ ಜನ್ಮದಿನ ಜೂನ್ ೯ ರನ್ನು ರಜಾರಹಿತ ದಿನವನ್ನಾಗಿ ಆಚರಣೆ ಮಾಡಬೇಕು. ಬಗರ್ ಹುಕುಂ ಸಾಗುವಳಿದಾರರು ಸಕ್ರಮಕ್ಕಾಗಿ ಸಲ್ಲಿಸಿರುವ ನಮೂನೆ-೫೭ರ ಅರ್ಜಿಗಳನುಸಾರ ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು. ಅರಣ್ಯ ಮತ್ತು ಅರಣ್ಯಾಧಾರಿತ ಆದಿವಾಸಿ ಕುಟುಂಬಗಳ ವಸತಿ ರಹಿತರಿಗಾಗಿ ಮುಖ್ಯಮಂತ್ರಿಗಳು ಆದಿವಾಸಿ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಸಾಮಾಜಿಕ ಭದ್ರತಾ ಯೋಜನೆಗಳಡಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ದೇವದಾಸಿಯರು, ವಿಧವಾ ಮಹಿಳೆಯರು ಹಾಗೂ ವಿಶೇಷಚೇತನರಿಗೆ ನೀಡುತ್ತಿರುವ ಮಾಸಾಶನ ರೂ. ೫,೦೦೦ ವರೆಗೆ ಹೆಚ್ಚಿಸಬೇಕು. ಸಮಾಜ ಕಲ್ಯಾಣ ಕಲ್ಯಾಣ ಇಲಾಖೆ ಅಧೀನದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ, ಭೂ ಒಡೆತನ, ನೇರಸಾಲ, ಉದ್ಯಮಶೀಲತಾ, ಸ್ವಾವಲಂಬಿ ಸಾರಥಿ ಯೋಜನೆ ಸಾಲ ಸೌಲಭ್ಯ ಯೋಜನೆಗಳ ಘಟಕ ವೆಚ್ಚ ದ್ವಿಗುಣವಾಗಿಸಿ, ಗುರಿ ಹೆಚ್ಚಳ ಮಾಡಬೇಕು. ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ (ಲಿಡ್ಕರ್) ನಿಗಮಕ್ಕೆ ರೂ. ೫೦೦ ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಪ.ಜಾತಿಯ ಚರ್ಮ ಕುಶಲ ಕರ್ಮಿಗಳ ಉತ್ಪನ್ನಗಳ ಮಾರುಕಟ್ಟೆಯ ಪ್ರಗತಿಗಾಗಿ ಆರ್ಥಿಕ ಇಲಾಖೆಯಿಂದ ಟೆಂಡರ್ ವಿನಾಯಿತಿಗಾಗಿ ರೂ. ೧೦೦ ಕೋಟಿಗೆ ಮೀಸಲಿರಿಸಿ ಆದೇಶ ಹೊರಡಿಸಬೇಕು ಹಾಗೂ ನಿಗಮದ ಎಲ್ಲಾ ಟೆಂಡರ್‌ಗಳನ್ನು ಪ.ಜಾತಿಯ ಚರ್ಮ ಕುಶಲ ಕರ್ಮಿಗಳ ಘಟಕಕ್ಕೆ ವಿನಾಯಿತಿಯೊಂದಿಗೆ ನೀಡಬೇಕು ಎಂಬಿತ್ಯಾದಿ ಹಕ್ಕೊತ್ತಾಯಗಳ ಈಡೇರಿಕಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಗಾಯತ್ರಿ ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಭೋಜ ಪಿ., ಮಡಿಕೇರಿ ತಾಲೂಕು ಮಹಿಳಾ ಸಂಚಾಲಕರಾದ ಗೌರಮ್ಮ ಹೆಚ್.ಹೆಚ್, ಪೊನ್ನಂಪೇಟೆ ತಾಲೂಕು ಸಂಚಾಲಕರಾದ ಗಣೇಶ ಪಿ.ಜಿ., ಸದಸ್ಯರುಗಳಾದ ನಿತಿನ್ ಪಿ.ಪಿ. ಹಾಗೂ ಕಾವೇರಿ ಪಿ.ಕೆ. ಹಾಜರಿದ್ದರು.
ಪ್ರತಿಭಟನೆ ಕುರಿತ ಭಿತ್ತಿಪತ್ರವನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು.