ಐಗೂರು, ಫೆ. ೨೭: ಭಾರತದ ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯ ದೊರಕುವ ಉದ್ದೇಶದಿಂದ ಪಿ.ಎಂ. ಅಭೀಮ್ ಸ್ಕೀಮ್ ಜಾರಿಗೆ ಬಂದಿದ್ದು ಇದರ ಪ್ರಯೋಜನವು ಕೊಡಗು ಜಿಲ್ಲೆಗೂ ವ್ಯಾಪಿಸಿದೆ ಎಂದು ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರ್ ಘಟಕ ಬೆಂಗಳೂರು. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಹೊಸತೋಟ ಗ್ರಾಮದಲ್ಲಿ ನೂತನವಾಗಿ ಅಂದಾಜು ಮೊತ್ತ ರೂ. ೬೫ ಲಕ್ಷದ ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಆರೋಗ್ಯ ಮಂದಿರದ ಕಟ್ಟಡದಲ್ಲಿ ನೆಲಮಹಡಿ, ಮೊದಲನೇ ಮಹಡಿ ಒಳಗೊಂಡಿದ್ದು, ಎಲ್ಲಾ ಆರೈಕೆ ಕೇಂದ್ರಗಳು, ಶೌಚಾಲಯದ ಸೌಲಭ್ಯ ಒಳಗೊಂಡಿದ್ದು, ಮೊದಲನೇ ಮಹಡಿಯಲ್ಲಿ ವಸತಿಗೃಹದ ಎರಡು ಕೊಠಡಿಗಳ ಸೌಲಭ್ಯವಿರುತ್ತದೆ. ಆರೋಗ್ಯ ಮಂದಿರಕ್ಕೆ ಸ್ಥಳ ಕಾಯ್ದಿರಿಸಿದ ಹೊಸತೋಟ ಜನತೆಯನ್ನು ಅವರು ಸ್ಮರಿಸಿದರು. ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಈಗಾಗಲೇ ಸಂಸದರು ಜಿಲ್ಲೆಗೆ ರೂ. ೯೭ ಕೋಟಿ ಹಣ ಕೇಂದ್ರ ಸರಕಾರದಿಂದ ಒದಗಿಸಿದ್ದು ಜಿಲ್ಲೆಯ ರಸ್ತೆ ಅಭಿವೃದ್ಧಿ ಕಂಡಿದೆ. ಕೇಂದ್ರ ಸರ್ಕಾರವು ಕಾಳುಮೆಣಸಿನ ತೆರಿಗೆಯ ವಿಚಾರದಲ್ಲಿ ರೈತರಿಗೆ ಲಾಭಗಳಿಸುವಂತೆ ಮಾಡಿದ್ದು ಜಿಲ್ಲೆಯ ರೈತರಿಗೆ ವರದಾನವಾಗಿದೆ. ರಾಜ್ಯ ಸರ್ಕಾರದ ಭಾಗ್ಯಗಳಿಂದ ರಸ್ತೆಯ ಗುಂಡಿಮುಚ್ಚಲು ಸರ್ಕಾರದಲ್ಲಿ ಹಣವಿಲ್ಲದೆ ವಾಹನ ಸವಾರರು ಪರದಾಡುವಂತಾಗಿದೆ. ಹೊಸತೋಟ ಭಾಗದಲ್ಲಿ ಹರಿಜನರು ಹೆಚ್ಚಾಗಿದ್ದು ನೂತನ ಆಸ್ಪತ್ರೆಯ ಯೋಜನೆಯು ಅನುಕೂಲಕರವಾಗಲಿದೆ ಎಂದರು. ಮಾದಾಪುರದ ಪಿಡಿಓ ರವಿ ನಾಯರ್ ಸ್ವಾಗತಿಸಿ, ಜಿಲ್ಲಾ ಆರೋಗ್ಯ ಅಧಿಕಾರಿ ಸತೀಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿ ಸತೀಶ್, ಡಿಎಸ್‌ಓ ಡಾ. ಶ್ರೀನಿವಾಸ್, ಡಾ. ಇಂದೂಧರ್, ಪಿಡಿಓ ರವಿ ನಾಯರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಲೀಂ ಹೊಸತೋಟ, ಸದಸ್ಯರಾದ ರಮೇಶ್, ಪದ್ಮನಾಭ, ನರೇಗಾ ಸಹಾಯಕ ನಿರ್ದೇಶಕ ರಾಕೇಶ್, ಲಿಖಿತ್ ದಾಮೋದರ, ರೋಹಿತ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.