ಮಡಿಕೇರಿ, ಮಾ. ೧: ಮಾರ್ಚ್ ೩ ರಂದು ಖಗ್ರಾಸ ಚಂದ್ರಗ್ರಹಣದ ಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಾಲಯ, ಶ್ರೀ ಆಂಜನೇಯ ದೇವಾಲಯ ಹಾಗೂ ಶ್ರೀ ಕೋಟೆ ಗಣಪತಿ ದೇವಾಲಯದಲ್ಲಿ ದೇವರ ದರ್ಶನ ಹಾಗೂ ವಿವಿಧ ಸೇವೆಗಳಲ್ಲಿ ವ್ಯತ್ಯಯವಿರಲಿದೆ.
ಅಂದು ಬೆಳಿಗ್ಗೆ ೭:೩೦ ರಿಂದ ಬೆಳಿಗ್ಗೆ ೯ ರವರೆಗೆ ಮಾತ್ರ ದೇವಾಲಯ ಭಕ್ತರ ದರ್ಶನಕ್ಕೆ ತೆರೆದಿರಲಿದೆ. ಬೆಳಿಗ್ಗೆ ೯ ಗಂಟೆಗೆ ಮಹಾಪೂಜೆ ನಡೆಯಲಿದ್ದು, ತದನಂತರ ದೇವಾಲಯವನ್ನು ಗ್ರಹಣ ಪ್ರಯುಕ್ತ ತೆರೆದಿರುವುದಿಲ್ಲ. ಸಂಜೆ ೬:೪೮ರ ಗ್ರಹಣ ಮೋಕ್ಷ ಕಳೆದ ನಂತರ ದೇವಾಲಯವನ್ನು ತೆರೆಯಲಾಗುವುದು, ಆದರೆ ಭಕ್ತರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ರಾತ್ರಿ ೮ ಗಂಟೆಗೆ ನಡೆಯುವ ಮಹಾ ಪೂಜೆಗೆ ಪಾಲ್ಗೊಳ್ಳಲು ಭಕ್ತಾದಿಗಳಿಗೆ ಅವಕಾಶವಿರುತ್ತದೆ.
ಗ್ರಹಣ ದೋಷ ಪರಿಹಾರಕ್ಕಾಗಿ ಓಂಕಾರೇಶ್ವರ ದೇವಾಲಯದಲ್ಲಿ ಮಾರ್ಚ್ ೪ ರಂದು ಬೆಳಿಗ್ಗೆ ೭:೩೦ ಗಂಟೆಯಿAದ ನಿತ್ಯ ಸೇವೆಗಳು ಹಾಗೂ ವಿಶೇಷವಾಗಿ ಗ್ರಹಣದೋಷ ಪರಿಹಾರ ಪೂಜೆ ಸೇವೆಯನ್ನು ನೆರವೇರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.