ವೀರಾಜಪೇಟೆ, ಮಾ. ೧: ಪಟ್ಟಣದ ಚಿಕ್ಕಪೇಟೆ ಸಮೀಪದ ದೇವರಕಾಡುವಿನ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ನಾಗದೇವರ ಪ್ರತಿಷ್ಠಾಪನೆ, ಬ್ರಹ್ಮ ಕಲಶೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಎರಡು ಶತಮಾನಗಳಿಗೂ ಹೆಚ್ಚಿನ ಐತಿಹ್ಯವಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ಶ್ರೀ ನಾಗದೇವರ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವೇದವ್ಯಾಸ ಹಾಗೂ ಮೋಹನ್ ಭಟ್ ನೇತೃತ್ವದಲ್ಲಿ ನಡೆಸಲಾಯಿತು.

ಸರ್ಪಸಂಸ್ಕಾರ ಹೋಮ, ಆಶ್ಲೇಷ ಬಲಿ ಮಹಾಪೂಜೆ, ಪುಣ್ಯಹಾ ತತ್ಸಮ, ಶ್ರೀ ಮಹಾವಿಷ್ಣುವಿಗೆ ಅಭಿಷೇಕ ಮತ್ತು ಪಂಚಾಮೃತ ಕಲಸ ಅಭಿಷೇಕ, ನಾಗಸನ್ನಿಧಿಯಲ್ಲಿ ವಾಸ್ತು ರಾಕ್ಷೋಜ್ಞ ಹೋಮ ಬಿಂಬಶುದ್ಧಿ, ಪ್ರಸಾದ ಶುದ್ಧಿ, ಪ್ರತಿಷ್ಠೆ ಪ್ರಧಾನ, ಹೋಮ ಪ್ರತಿಷ್ಠೆ, ಕಲಶ ದಿವಸ ಹೋಮ, ಕಲಶ ಪ್ರತಿಷ್ಠಾಪನೆ, ಅಭಿಷೇಕ ಆಶ್ಲೇಷ ಬಲಿ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯ ಮೂರು ದಿನಗಳ ಕಾಲ ನೆರವೇರಿತು. ಮೂರು ದಿನವೂ ನೆರೆದ ಭಕ್ತಾದಿಗಳಿಗೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭ ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರತಾಪ್, ಶ್ರೀ ಕಾವೇರಿ ಆಶ್ರಮದ ಕಾರ್ಯಕಾರಿ ಮಂಡಳಿ ಸದಸ್ಯರಾದ ದಮಯಂತಿ, ಅನಿತಾ ದೇವಯ್ಯ, ಕಾವೇರಿ ಆಶ್ರಮದ ಸ್ವಾಮೀಜಿಗಳಾದ ಆತ್ಮಪ್ರಕಾಶಾನಂದ, ದೇವಸ್ಥಾನದ ಅರ್ಚಕರಾದ ಗೋಪಾಲಾಚಾರಿ ಭಟ್, ಶ್ರೀ ಕಾವೇರಿ ಆಶ್ರಮದ ಟ್ರಸ್ಟ್ ಅಧ್ಯಕ್ಷ ನಾಯಕಂಡ ಅಯ್ಯಪ್ಪ, ನಾಗ ಪ್ರತಿಷ್ಠಾಪನ ಸಮಿತಿ ಕಾರ್ಯದರ್ಶಿ ಸೀತಾರಾಮ ರೈ, ಪದ್ಮನಾಭ, ಸುರೇಶ, ಸತೀಶ್, ರಾಜೇಶ್, ಮಾಚಯ್ಯ ಮುಂತಾದವರು ಇದ್ದರು.