ಕೂಡಿಗೆ, ಮಾ. ೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದಲ್ಲಿರುವ ಜಯಮ್ಮ (ಯಲಮ್ಮ) ಎಂಬವರಿಗೆ ಸೇರಿದ ಮನೆಯ ಮೇಲ್ಛಾವಣಿ ಮುರಿದು ಬಿದ್ದ ಘಟನೆ ನಡೆದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೊಡ್ಡತ್ತೂರು ಗ್ರಾಮದಲ್ಲಿರುವ ಜಯಮ್ಮ ಅವರ ಮನೆಗೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆಯಲ್ಲಿದ್ದ ವಯೋವೃದ್ಧೆ ಜಯಮ್ಮ ಜೊತೆಯಲ್ಲಿ ವಿಶೇಷಚೇತನ ಮಹಿಳೆಯ ಕುಶಲೋಪರಿಯನ್ನು ವಿಚಾರಿಸಿದರು. ನಂತರ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ನಿಯಮಾನುಸಾರ ವಸತಿ ರಹಿತರ ಪಟ್ಟಿಯಡಿಯಲ್ಲಿ ನೂತನ ಮನೆಯನ್ನು ನಿರ್ಮಿಸಲು ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ ನಾಯಕ್, ಮಾಜಿ ಸದಸ್ಯ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಇದ್ದರು.