ವೀರಾಜಪೇಟೆ, ಮಾ. ೧: ಕೆಂಪು ಪುಸ್ತಕ ದಿನಾಚರಣೆ ಅಂಗವಾಗಿ ಯು.ಎಸ್. ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು ಎಂಬ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ವೀರಾಜಪೇಟೆ ಸಿಪಿಐಎಂ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಿಪಿಐಎಂ ಪಕ್ಷದ ಜಿಲ್ಲಾ ಹಿರಿಯ ಮುಖಂಡ ಡಾ. ದುರ್ಗಾ ಪ್ರಸಾದ್ ಅವರು, ೧೮೪೮ರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ರಚಿಸಿದ ಕಮ್ಯುನಿಸ್ಟ್ ಪ್ರಣಾಳಿಕೆಯ ಬಿಡುಗಡೆಯ ನೆನಪಿನಲ್ಲಿ ಜಗತ್ತಿನಾದ್ಯಂತ ಕೆಂಪು ಪುಸ್ತಕ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ಅಮೇರಿಕಾ ಸಾಮ್ರಾಜ್ಯಶಾಹಿಯು ಸಮಾಜವಾದಿ ರಾಷ್ಟçಗಳ ಸಂಪತ್ತನ್ನು ಲೂಟಿ ಮಾಡಲು ನಿರಂತರ ಮಿಲಿಟರಿ ದಾಳಿಗಳು ಮತ್ತು ರಾಜಕೀಯ ಒತ್ತಡಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ ಅವರು, ಭಾರತದ ಮೇಲೂ ನೇರ ಸೈನಿಕ ದಾಳಿಯ ಬದಲಿಗೆ ರೈತರು ಹಾಗೂ ಕಾರ್ಮಿಕರ ಪರವಾದ ಕಾನೂನುಗಳನ್ನು ಬದಲಾಯಿಸುವ ಮೂಲಕ ನೀತಿಗಳನ್ನು ತಮ್ಮ ಪರ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಸಾಮ್ರಾಜ್ಯಶಾಹಿ ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದ್ದು, ಅದಿಲ್ಲದೆ ದೇಶದ ಭವಿಷ್ಯಕ್ಕೆ ಅಪಾಯ ಎದುರಾಗಬಹುದು ಎಂದು ಎಚ್ಚರಿಸಿದರು. ಇದರ ವಿರುದ್ಧ ಸಂಘಟಿತ ಆಂದೋಲನಗಳು ನಡೆಯಬೇಕೆಂದು ಕರೆ ನೀಡಿದರು.
ಸಿಪಿಐಎಂ ಪಕ್ಷದ ಜಿಲ್ಲಾ ಸದಸ್ಯ ಎ.ಸಿ. ಸಾಬು ಮಾತನಾಡಿ, ೧೮೪೮ರ ಫೆಬ್ರವರಿ ೨೧ ರಂದು ಪ್ರಕಟವಾದ ಕಮ್ಯುನಿಸ್ಟ್ ಪ್ರಣಾಳಿಕೆಯ ಬಿಡುಗಡೆಯ ನೆನಪಿನಲ್ಲಿ ಕೆಂಪು ಪುಸ್ತಕ ದಿನವನ್ನು ಆಚರಿಸಲಾಗುತ್ತದೆ. ಈ ಕೃತಿಯನ್ನು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ರಚಿಸಿದ್ದು, ಕಾರ್ಮಿಕ ವರ್ಗದ ಹಕ್ಕುಗಳು, ವರ್ಗ ಹೋರಾಟ ಮತ್ತು ಸಮಾಜ ಪರಿವರ್ತನೆಯ ತತ್ವಗಳನ್ನು ವಿವರಿಸುತ್ತದೆ. ರೆಡ್ ಬುಕ್ ದಿನದ ಉದ್ದೇಶ ಸಮಾಜದಲ್ಲಿ ಅಸಮಾನತೆ, ಶೋಷಣೆ, ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ ಎಂದು ಹೇಳಿದರು.
ಸಿಪಿಐಎಂ ಪಕ್ಷದ ಶಾಖ ಕಾರ್ಯದರ್ಶಿ ಶಾಜಿ ರಮೇಶ್, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಪದ್ಮಿನಿ ಶ್ರೀಧರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ವಿಭಾಗೀಯ ಸಂಚಾಲಕ ಸತೀಶ್, ದಲಿತ ಸಂಘರ್ಷ ಸಮಿತಿಯ ವೀರಾಜಪೇಟೆ ತಾಲೂಕು ಸಂಚಾಲಕ ಎಚ್.ಎಸ್ ಕುಮಾರ್, ಕಟ್ಟಡ ಕಾರ್ಮಿಕ ಸಂಘದ ಕೆ.ಕೆ ಹರಿದಾಸ್, ಖಾಸಿಂ, ಡಿವೈಎಫ್‌ಐ ಸಂಘಟನೆಯ ಜಿಲ್ಲಾ ಮುಖಂಡ ಸಾಧಿಕ್ ವೇದಿಕೆಯಲ್ಲಿದ್ದರು.
ವಿವಿಧ ಕ್ಷೇತ್ರಗಳಲ್ಲಿ ದುಡಿಯುವವರು ಕಾರ್ಯಕ್ರಮದಲ್ಲಿದ್ದು ಸಂವಾದದಲ್ಲಿ ಭಾಗವಹಿಸಿದ್ದರು.