ಮಡಿಕೇರಿ, ಮಾ. ೧: ಬೆಟ್ಟತ್ತೂರು ಬಳಿ ಕಾಡಾನೆ ದಾಳಿಗೆ ಸಾವನ್ನಪ್ಪಿದ ವಿದ್ಯಾರ್ಥಿನಿ ಪೂಜಾ ಕುಟುಂಬದವರಿಗೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಸಾಂತ್ವನ ಹೇಳಿದರು. ಬೆಟ್ಟತ್ತೂರಿನ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕರು, ಸಾವು ನೋವು ತಂದಿದೆ, ಸರ್ಕಾರದಿಂದ ದೊರೆಯಬೇಕಾದ ಪರಿಹಾರವನ್ನು ಒದಗಿಸಲಾಗುವುದು. ಒಂಟಿ ಸಲಗ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಅರಣ್ಯ ಸಚಿವರ ಜೊತೆ ಚರ್ಚಿಸಲಾಗಿದ್ದು, ಸೂಕ್ತ ಪರಿಹಾರ ಒದಗಿಸಲು ಮನವಿ ಮಾಡಲಾಗಿದೆ ಎಂದರು. ಆನೆಯ ಪತ್ತೆಗೆ ಆಧುನಿಕ ಡ್ರೋನ್ ವ್ಯವಸ್ಥೆಯನ್ನು ಮಾಡಲಾಗಿದ್ದು, ನೈಟ್ ವಿಷನ್ ಹಾಗೂ ಥರ್ಮಲ್ ಇಮೇಜಿಂಗ್ ಡ್ರೋನ್ ತಂತ್ರಜ್ಞಾನ ಅಳವಡಿಸಲಾಗಿದೆ. ರಾತ್ರಿ ಕಾರ್ಯಾಚರಣೆ ಮುಂದುವರಿಯಲಿದೆ. ಇದೇ ಸಂದರ್ಭ ಶಾಸಕರು ಡ್ರೋನ್ ಮುಖಾಂತರ ಆನೆ ಪತ್ತೆ ಕಾರ್ಯಾಚರಣೆ ಪರಿಶೀಲಿಸಿದರು.
ಈ ಸಂದರ್ಭ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷÀ ಧರ್ಮಜ ಉತ್ತಪ್ಪ, ಪ್ರಮುಖರಾದ ಕೊಲ್ಯದ ಗಿರೀಶ್, ಸೂರಜ್ ಹೊಸೂರು, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಸೋನಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಇತರರು ಇದ್ದರು.