ಮಡಿಕೇರಿ, ಮಾ. ೧: ಪತ್ರಕರ್ತರಿಗೆ ನಿರಂತರ ಕಲಿಕೆ ಮುಖ್ಯ. ಯಾವುದೇ ಸುದ್ದಿಯಾದರೂ ಸಕರಾತ್ಮಕ ವಿಮರ್ಶೆ ನೀಡಬೇಕು ಎಂದು ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕೊಡಗು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸಂವಿಧಾನ ಮತ್ತು ಪತ್ರಿಕೋದ್ಯಮ ಬಗ್ಗೆ ವಿಚಾರ ಸಂಕಿರಣ, ಫ್ಯಾಕ್ಟ್ ಚೆಕ್ ಮತ್ತು ನ್ಯೂಸ್ ರೂಂನಲ್ಲಿ ಎಐ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನಕ್ಕೆ ಮಿತಿ ಇಲ್ಲ. ಸಮಾಜದ ಅಂಕುಡೊAಕುಗಳನ್ನು ತಿದ್ದಲು ಪತ್ರಕರ್ತರು ಅತಿ ಮುಖ್ಯ. ರಾಜಕಾರಣಿಗಳು ತಲುಪದ ಕಡೆ ಪತ್ರಕರ್ತರು ತಲುಪುತ್ತಾರೆ. ಸಮಾಜದ ಸಮಸ್ಯೆಗಳನ್ನು ತೆರೆದಿಡುವ ಕೆಲಸ ಮಾಡುತ್ತಾರೆ. ಈ ಸಂದರ್ಭ ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ ಆಗಬಾರದು. ಏಕವಚನ ಪ್ರಯೋಗ, ನಿರಾಧಾರ ಆರೋಪಗಳ ಬಗ್ಗೆ ಗಮನ ಹರಿಸಬೇಕು ಎಂದರು.
ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಮಾತನಾಡಿ, ಭಾರತವು ಸ್ವತಂತ್ರ ದೇಶವಾಗಿ, ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡು ೮೦ ವರ್ಷಗಳಾಗುತ್ತ ಬರುತ್ತಿವೆ.
ನಾವು ೫೦-೬೦ ವರ್ಷಗಳ ಕಾಲ ಸಂವಿಧಾನದ ಮಹತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಸಂವಿಧಾನಕ್ಕಿರುವ ಮಹತ್ವ ಅದರ ರಚನಾತ್ಮಕತೆ, ಪ್ರತಿಪಾದಿಸುವ ಕರ್ತವ್ಯಶೀಲತೆ, ನಮ್ಮೆಲ್ಲರಿಗೂ ದಯಪಾಲಿಸಿರುವ ಮೂಲಭೂತ ಹಕ್ಕುಗಳು, ವಿಧಿಸಿರುವ ಕರ್ತವ್ಯಗಳು, ದೇಶದ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಸೂಚಿಸಿರುವ ನಿರ್ಬಂಧಗಳು, ಸಾಮೂಹಿಕ ಹಿತದ ದೃಷ್ಟಿಯಿಂದ ವಿಶೇಷವಾಗಿ ಪತ್ರಕರ್ತರು ರೂಢಿಸಿಕೊಳ್ಳಬೇಕಾದ ಹೊಣೆಗಾರಿಕೆಯ ಸ್ವರೂಪ ಇವೆಲ್ಲವೂ ಈಗ ಮುಂಚೂಣಿಗೆ ಬಂದಿದ್ದು, ರಚನಾತ್ಮಕವಾದ ಚರ್ಚೆ ನಡೆಯುತ್ತಿದೆ ಎಂದು ಅಭಿಪ್ರಾಯಿಸಿದರು.
ದೇಶದ ಸ್ವಾತಂತ್ರö್ಯ ಹೋರಾಟ ಮತ್ತು ಅದರ ಬೆನ್ನಲ್ಲೇ ನಡೆದ ಸಂವಿಧಾನ ರಚನೆ ಎರಡನ್ನೂ ನೋಡಿದರೆ, ಅಲ್ಲಿ ದುಡಿದಿರುವವರೆಲ್ಲರೂ ಪತ್ರಕರ್ತರಾಗಿ, ಸಂಪಾದಕರಾಗಿ, ಪತ್ರಿಕೆಗಳ ಸ್ಥಾಪಕರಾಗಿ ಈ ಸಮಾಜದ ಒಳಿತಿನ ಬಗ್ಗೆ ಬರೆದವರೇ ಆಗಿದ್ದಾರೆ. ಅವರ ದೃಷ್ಟಿಯಲ್ಲಿ ಪತ್ರಿಕಾರಂಗ ವ್ಯಾಪಾರ ಆಗಿರಲಿಲ್ಲ. ಬದಲಿಗೆ, ಸಮಾಜಸೇವೆಯ ಒಂದು ಮಾರ್ಗವಾಗಿತ್ತು ಎಂದು ನುಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಪ್ರಾಸ್ತವಿಕ ಮಾತನಾಡಿ, ಮಾಧ್ಯಮ ಮತ್ತು ಸಂವಿಧಾನ ಅಗತ್ಯ. ಪತ್ರಕರ್ತರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು.
ಪತ್ರಕರ್ತರು ಸಂವಿಧಾನವನ್ನು ಅರಿತು ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು. ಸುದ್ದಿ ಮಾಧ್ಯಮದಲ್ಲಿ ಭಾಷೆ ಬಳಕೆಯ ಬಗ್ಗೆ ಅರಿವು ಹೊಂದಿರಬೇಕು. ಮಾಧ್ಯಮ ಅಕಾಡೆಮಿಯಿಂದ ಎಲ್ಲ ಕಡೆ ಪ್ಯಾಕ್ಟ್ ಚೆಕ್ಕಿಂಗ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದು ಸುಳ್ಳು ಸುದ್ದಿಗಳ ಬಗ್ಗೆ ಸಮರವಾಗಿದೆ ಎಂದು ಹೇಳಿದರು.
ವಿಚಾರ ಸಂಕಿರಣ
ಫ್ಯಾಕ್ಟ್ ಚೆಕ್ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಎಂಬ ವಿಷಯದ ಕುರಿತು ಹಿರಿಯ ಪತ್ರಕರ್ತರಾದ ಸಮೀವುಲ್ಲಾ ಮಾತನಾಡಿ, ನಾವು ಸುದ್ದಿಸ್ಪೋಟದಂತಹ ಕಾಲಘಟ್ಟದಲ್ಲಿದ್ದೇವೆ. ಮುದ್ರಣ ಮಾಧ್ಯಮವೂ ಈ ಹಂತದಲ್ಲಿದೆ. ನಾವು ಭಾಷೆ ಬೆಳೆಸುವ ಬದಲು ಕೊಲ್ಲುತ್ತಿದ್ದೇವಾ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಭಾಷೆ ಮನುಷ್ಯತನವನ್ನೆ ಅಣಕಿಸುವ ಹಾಗಿದೆ. ಪತ್ರಕರ್ತರು ವಿಶೇಷ ಜೀವಿಗಳಲ್ಲ, ಪ್ರಶ್ನಾತೀತರಲ್ಲ. ನಮಗೆ ನಾವೆ ಲಕ್ಷö್ಮಣ ರೇಖೆ ಹಾಕಿಕೊಳ್ಳುವ ಕಾಲ ಮುಗಿದಿದೆ. ಎಚ್ಚೆತ್ತುಕೊಳ್ಳದೇ ಹೋದರೆ ಮುಂದೆ ಕಷ್ಟ ಎಂದು ಹೇಳಿದರು. ಸುದ್ದಿ ಬರೆಯುವುದು ಒಂದು ಕಲೆಗಾರಿಕೆ. ಭಾಷೆ ಮಾರಾಟದ ಸಾಧನವಾಗಿದೆ. ಅಸಭ್ಯ, ದ್ವಂದಾರ್ಥದ ಭಾಷೆ ಪತ್ರಿಕೋದ್ಯಮ ಅಲ್ಲವೇ ಅಲ್ಲ. ಭಾಷೆ ಹದ ತಪ್ಪಿದರೆ ಯುದ್ಧವೇ ಉಂಟಾಗುತ್ತದೆ. ಭಾಷಾ ಗಾಂಭೀರ್ಯ ಇರಬೇಕು.
ಭಾಷಾ ಬಳಕೆ ಕುರಿತು ಜವಾಬ್ದಾರಿ ಇರಬೇಕು. ಭಾಷಾ ಬೆಳವಣಿಗೆಗೆ ಪತ್ರಿಕೋದ್ಯಮದ ಕೊಡುಗೆ ಇದೆ. ಸುದ್ದಿಯನ್ನು ಭಾಷೆಯ ಮೂಲಕ ಕೊಡುವುದು ಪತ್ರಿಕೋದ್ಯಮದ ಕೆಲಸ ಎಂದರು.
ಸುಧಾ ವಾರಪತ್ರಿಕೆಯ ಸಂಪಾದಕಿ ರಶ್ಮಿ ಎಸ್.ಮಾತನಾಡಿ, ಓದುಗರು ನಮಗಿಂತ ಹೆಚ್ಚು ತಿಳಿದವರು. ಆದ್ದರಿಂದ ನಮ್ಮಲ್ಲಿ ಸಾಕಷ್ಟು ಪದಸಿರಿ ಇರಬೇಕು. ನಮ್ಮ ಬಂಡವಾಳ ಶಬ್ದಗಳೇ ಆಗಿರಬೇಕು. ಭಾಷೆ ಬಳಸುವ ವೇಳೆ ಜಿಪುಣರಾಗಬೇಕು. ತೂಕದ ಶಬ್ದ ಬಳಕೆ ಮಾಡಬೇಕು.
ನೈಸರ್ಗಿಕ ಬುದ್ದಿವಂತಿಕೆ ಇರಬೇಕು. ಸುದೀರ್ಘವಾದ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಫ್ಯಾಕ್ಟ್ ಚೆಕ್ ಮತ್ತು ನ್ಯೂಸ್ ರೂಂನಲ್ಲಿ ಎಐ ಎಂಬ ವಿಷಯದ ಕುರಿತು ಎಐ ಪರಿಣಿತರಾದ ಐಐಟಿ ರಾಹುಲ್ ಗುಂಡಾಲ ವಿಚಾರ ಮಂಡಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಸವಿತಾ ರೈ ಹಾಗೂ ಇತರರು ಇದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎನ್.ಎಸ್. ಮಹೇಶ್ ಸ್ವಾಗತಿಸಿದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭ ದಲ್ಲಿ ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು.
ಕೃತಕ ಬುದ್ಧಿಮತ್ತೆ(ಎಐ)ಯನ್ನು ಸದ್ಭಳಕೆ ಮಾಡಿಕೊಂಡು ನಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳಬೇಕು. ಎಐ ಬಂದಿದೆ ಯಾದರೂ, ಅದು ಎಲ್ಲವನ್ನೂ ಮಾಡುತ್ತದೆ ಎಂದು ಹೇಳಲಾಗದು. ಒಬ್ಬ ವ್ಯಕ್ತಿಯ ಬರಹದ ಮಟ್ಟಕ್ಕೆ ಎಐ ತಲುಪಲು ಸಾಧ್ಯವಾಗದು ಎಂದೆನಿಸುತ್ತದೆ. ಅದು ಮುಂದೆ ಎಷ್ಟು ಪರಿಣಾಮಕಾರಿಯಾಗಿ ಬರುತ್ತದೆ ಎಂಬುದು ಗೊತ್ತಿಲ್ಲ. ಆದರೆ, ನಾವಿಲ್ಲದೇ ಎಐ ಇರಲು ಸಾಧ್ಯವಿಲ್ಲ. ಅದನ್ನು ಸದ್ಭಳಕೆ ಮಾಡಿಕೊಂಡು ನಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ನ್ಯಾಯಾಂಗ ಮತ್ತು ಪತ್ರಿಕಾಂಗವು ಸಂವಿಧಾನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂವಿಧಾನ ಉಳಿದರೆ ಮಾತ್ರ ಸ್ವಾತಂತ್ರ್ಯ ಉಳಿಯುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ವಿವರಿಸಿದರು.