ಮೈಸೂರು, ಮಾ. ೫: ಮೈಸೂರು - ಕೊಡಗು ಸಂಸದ ಯದುವೀರ್ ಒಡೆಯರ್ ಪ್ರಯತ್ನದ ಫಲವಾಗಿ ಕೊಡಗಿನಲ್ಲಿ ಪಾಸ್ಪೋರ್ಟ್ ಮೇಳ ಆಯೋಜಿಸಲು ಬೆಂಗಳೂರು ವಿಭಾಗೀಯ ಪಾಸ್ಪೋರ್ಟ್ ಕಚೇರಿ ನಿರ್ಧರಿಸಿದೆ.
ಏಪ್ರಿಲ್ ೮ ರಿಂದ ಮೂರು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಪಾಸ್ಪೋರ್ಟ್ ಮೇಳ ನಡೆಯಲಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಗಳಿಗೆ ಪತ್ರ ಬರೆದಿದ್ದ ಯದುವೀರ್ ಒಡೆಯರ್ ಕೊಡಗು ಜಿಲ್ಲೆಯಲ್ಲಿ ಪಾಸ್ಪೋರ್ಟ್ ಮೇಳ ಆಯೋಜಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಬೆಂಗಳೂರು ರೀಜನಲ್ ಪಾಸ್ ಪೋರ್ಟ್ ಅಧಿಕಾರಿಗಳು ಸಂಸದರಿಗೆ ಪತ್ರ ಬರೆದು, ಏಪ್ರಿಲ್ ೮, ೯, ೧೦ ರಂದು ಮೇಳ ಆಯೋಜಿಸಲಾಗುವುದು ಹಾಗೂ ೮ ರಂದು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಆಗಮಿಸಬೇಕು ಎಂದು ಸಂಸದರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಂಸದ ಯದುವೀರ್ ಒಡೆಯರ್, ಕಳೆದ ಬಾರಿ ನವದೆಹಲಿಗೆ ತೆರಳಿದಾಗ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀಪ್ರಿಯಾ ರಂಗನಾಥನ್ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲೆಯಲ್ಲಿ ಪಾಸ್ಪೋರ್ಟ್ ಮೇಳ ಆಯೋಜಿಸಲು ತಾನು ಮನವಿ ಸಲ್ಲಿಸಿದ್ದೆ.
ಕೊಡಗು ಜಿಲ್ಲೆಯ ನಾಗರಿಕರು ಈ ಪಾಸ್ಪೋರ್ಟ್ ಮೇಳವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.