ಕಣಿವೆ, ಮಾ. ೫: ಕುಶಾಲನಗರ ಪುರಸಭಾ ವ್ಯಾಪ್ತಿಗೊಳಪಡುವ ಬೈಚನಹಳ್ಳಿಯ ಆರ್ಸಿ ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಇಲಾಖೆ ತೆರೆಯಲು ಯೋಜಿಸಿರುವ ಮೌಲಾನಾ ಆಜಾದ್ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬಡಾವಣೆಗಳ ನಿವಾಸಿಗಳು ವಿರೋಧಿಸಿದ್ದಾರೆ.
ಬಡಾವಣೆಯ ನಿವಾಸಿಗಳು ಶ್ರಮದಾನ ಮಾಡುವ ಮೂಲಕ ಹಾಗೂ ಮನೆ ಮನೆಗಳಲ್ಲಿ ಹಣ ಸಂಗ್ರಹಿಸಿ ಸಮತಟ್ಟು ಹಾಗೂ ಸ್ವಚ್ಛವಾಗಿಟ್ಟುಕೊಂಡಿರುವ ವಿಶಾಲ ಉದ್ಯಾನವನದ ಜಾಗದ ೪೫ ಸೆಂಟು ಜಾಗದಲ್ಲಿ ಶಾಲೆ ತೆರೆಯ ಹೊರಟಿರುವುದು ಅವೈಜ್ಞಾನಿಕವಾಗಿದೆ.
ಏಕೆಂದರೆ ಸರ್ಕಾರದ ವತಿಯಿಂದ ನಿರ್ಮಾಣವಾಗುವ ಹೊಸ ಶಾಲಾ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಆಟದ ಮೈದಾನ, ವಾಹನಗಳ ಪಾರ್ಕಿಂಗ್, ವಿಶಾಲವಾದ ರಸ್ತೆ ಹೀಗೆ ಮೂಲ ಸೌಕರ್ಯಗಳು ಇರಬೇಕು. ಆದರೆ ಕೊಡಗು ಅಲ್ಪಸಂಖ್ಯಾತ ಇಲಾಖೆ ಕಿಷ್ಕಿಂದೆಯAತಿರುವ ಜಾಗದಲ್ಲಿ ಶಾಲೆ ತೆರೆಯಲು ಯೋಜಿಸಿರುವುದು ಸಮಂಜಸವಲ್ಲ ಎಂದು ಬಡಾವಣೆ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಕಣಿವೆ ನಾಗೇಂದ್ರ ಉಪಾಧ್ಯಕ್ಷೆ ರಾಣಿ, ಕಾರ್ಯದರ್ಶಿ ಕಮಲ್, ಖಜಾಂಚಿ ನಾಗರಾಜು ತಿಳಿಸಿದ್ದಾರೆ.
ಬಡಾವಣೆಯ ನಿವಾಸಿಗಳು ಒಂದೆಡೆ ಸೇರಿ ಸಭೆ ನಡೆಸಿ ಇಲಾಖೆಯ ಕ್ರಮವನ್ನು ಖಂಡಿಸಿ ಸಂಸದರು, ಶಾಸಕರು ಹಾಗೂ ತಾಲೂಕು ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ದೇಶದ ಗಡಿಗಳಲ್ಲಿ ಜೀವದ ಹಂಗುತೊರೆದು ಸೇವೆ ಮಾಡಿ ನಿವೃತ್ತಿಯಾಗಿ ಬಂದಿರುವ ಅನೇಕ ಮಂದಿ ಮಾಜಿ ಸೈನಿಕರು ಇಲ್ಲಿ ಮನೆಗಳನ್ನು ನಿರ್ಮಿಸಿ ಶಾಂತಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಬಡಾವಣೆಯಲ್ಲಿ ವಯೋವೃದ್ಧರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರೆಲ್ಲರ ನೆಮ್ಮದಿಗೆ ಭಂಗವಾಗದ ರೀತಿಯಲ್ಲಿ ಉದ್ದೇಶಿತ ಶಾಲೆಯ ಕಟ್ಟಡ ಕಾಮಗಾರಿಯನ್ನು ಬೇರೆ ಜಾಗದಲ್ಲಿ ಆರಂಭಿಸಲಿ. ಒಂದು ವೇಳೆ ಇಲಾಖೆ ಅಧಿಕಾರಿಗಳು ಹಠಮಾರಿ ಧೋರಣೆ ಅನುಸರಿಸಿದಲ್ಲಿ ಹೋರಾಟಕ್ಕೂ ಮುಂದಾಗುವುದಾಗಿ ನಾಗೇಂದ್ರ ಎಚ್ಚರಿಸಿದ್ದಾರೆ.
ಸಭೆಯಲ್ಲಿ ಬಡಾವಣೆಯ ಪ್ರಮುಖರಾದ ವಕೀಲ ಜಗದೀಶ್, ಇಂಜಿನಿಯರ್ ಸಂದೀಪ್, ಬಿ.ಎಸ್. ಶಿವಕುಮಾರ್, ರೇಣುಕುಮಾರ್, ಪುನೀತ್, ಚೈತ್ರ, ಪುಷ್ಪ, ಮಂಜು, ನಾಗಮಣಿ, ಸುರೇಖಾ, ಶ್ಯಾಮಲಾ ಮೊದಲಾದವರು ಇದ್ದರು.