ಹೆಬ್ಬಾಲೆ, ಮಾ. ೮: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ, ವಿಸ್ತರಣಾ ಘಟಕ ಮಡಿಕೇರಿ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಅತ್ಮಾ ಯೋಜನೆಯಡಿಯಲ್ಲಿ ಕಲ್ಲಂಗಡಿ ಬೆಳೆಯ ಕ್ಷೇತ್ರೋತ್ಸವ ಮತ್ತು ಜೇನು ಕೃಷಿಯ ಕುರಿತ ತರಬೇತಿ ಕಾರ್ಯಕ್ರಮ ಮಣಜೂರಿನ ರೈತ ಭವನದಲ್ಲಿ ನಡೆಯಿತು.
ಕೃಷಿ ಇಲಾಖೆಯ ಉಪನಿರ್ದೇಶಕ ಡಾ. ಸೋಮಶೇಖರ್ ಮಾತನಾಡಿ, ತೋಟಗಾರಿಕೆ ವೈವಿಧ್ಯ ಬೆಳೆಗಳನ್ನು ಹೆಚ್ಚು ರೈತರು ಬೆಳೆಯುತ್ತಿದ್ದಾರೆ. ಏಕಬೆಳೆ ಬದಲಿಗೆ ವೈವಿಧ್ಯ ಬೆಳೆಗೆ ಹೆಚ್ಚಿನ ಒತ್ತು ಕೊಡಬೇಕು. ಏಕಬೆಳೆಗೆ ಬೆಲೆ ಕಡಿಮೆಯಾದಾಗ ಹೆಚ್ಚು ನಷ್ಟ ಉಂಟಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ವಿಜ್ಞಾನಿಗಳ ಸಲಹೆ ಪಡೆದು ವೈಜ್ಞಾನಿಕ ಕೃಷಿ ಪದ್ಧತಿಯನ್ನು ಕೈಗೊಳ್ಳಬೇಕು ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ. ಶಶಿಧರ್ ವೈಜ್ಞಾನಿಕ ಜೇನು ಕೃಷಿ ಕುರಿತು ಮಾತನಾಡಿ, ಕೊಡಗಿನಲ್ಲಿ ಹೆಚ್ಚು ತೋಟಗಾರಿಕೆ ಬೆಳೆಗಳನ್ನು ಬೆಳೆ ಯಾಗುತ್ತಿದೆ. ಮಾರುಕಟ್ಟೆ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು. ರೈತರು ಹೈನುಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಕೃಷಿಯೊಂದಿಗೆ ಸಮಗ್ರ ಕೃಷಿ ಪದ್ಧತಿ ಕೈಗೊಂಡು ಯಶಸ್ಸು ಗಳಿಸಿದ್ದಾರೆ. ಜೇನು ಸಾಕಾಣಿಕೆಯನ್ನು ಉಪ ಬೆಳೆಯಾಗಿ ಮಾಡಬಹುದು. ಇದು ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದೆ. ಜೊತೆಗೆ ಜೇನು ಉತ್ತಮ ಆಹಾರ ಬೆಳೆಯಾಗಿದೆ. ರೈತರು ವಿಜ್ಞಾನಿಗಳು ತರಬೇತಿಯಲ್ಲಿ ನೀಡಿದ ಸಲಹೆಗಳನ್ನು ಅನುಸರಿಸುವ ಮೂಲಕ ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪೊನ್ನAಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿಕರು ವೈಜ್ಞಾನಿಕ ಅಂಶಗಳ ಬಗ್ಗೆ ಅರಿತುಕೊಳ್ಳಬೇಕು. ಕಲ್ಲಂಗಡಿ ಹೆಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ರೈತರು ತಮ್ಮ ಕೃಷಿ ಚಟುವಟಿಕೆಯೊಂದಿಗೆ ಕಲ್ಲಂಗಡಿ ಬೆಳೆ ಬೆಳೆದು ತಮ್ಮ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೊಡಗಿನ ಜೇನಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಜೇನು ನೋಣಗಳ ಸಂತತಿ ಕಡಿಮೆ ಆಗುತ್ತಿದೆ. ಆದ್ದರಿಂದ ಜೇನು ಕೃಷಿ ಕೈಗೊಂಡು ಜೇನು ನೋಣಗಳ ಸಂತತಿ ಅಭಿವೃದ್ಧಿಯೊಂದಿಗೆ ಹೆಚ್ಚು ಲಾಭಗಳಿಸಬೇಕು ಎಂದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವೀರೇಂದ್ರ ಕುಮಾರ್, ರೋಗ ಮತ್ತು ಕೀಟಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಡಾ. ರಾಣಿ ಅವರು ಕಲ್ಲಂಗಡಿ ಬೆಳೆಗೆ ಬರುವ ರೋಗ ಮತ್ತು ಕೀಟಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತಾರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್. ಎನ್. ಕೆಂಚರೆಡ್ಡಿ, ಸಹ ಪ್ರಾಧ್ಯಾಪಕ ಡಾ. ಪಿ. ಹೇಮಂತ್ ಕುಮಾರ್, ಪೊನ್ನಂಪೇಟೆ ಕೃಷಿ ಸಂಶೋಧನಾ ಕೇಂದ್ರ ಸಹಾಯಕ ಪ್ರಾಧ್ಯಾಪಕ ಡಾ. ಪ್ರಶಾಂತ್,ಮಡಿಕೇರಿ ಕೃಷಿ ಇಲಾಖೆಯ ಉಪ ಯೋಜನಾ ನಿರ್ದೇಶಕಿ ಪಿ.ಜಿ. ಮೈತ್ರಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಂ.ಭರತ್, ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ಎಂ. ಎಸ್. ಜೀವನ್, ನಿರ್ದೇಶಕ ಬಸವರಾಜು, ಮಣಜೂರು ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಂ.ಪಿ. ರಾಜಶೇಖರ್, ಶಿರಂಗಾಲ ಮಂಟಿಗಮ್ಮ ದೇವಾಲಯ ಸಮಿತಿ ಅಧ್ಯಕ್ಷ ನೇಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್. ರಮೇಶ್ , ಪ್ರಗತಿಪರ ಕೃಷಿಕ ಶೇಷಪ್ಪ, ಮತ್ತಿತರರು ಪಾಲ್ಗೊಂಡಿದ್ದರು.