ಸೋಮವಾರಪೇಟೆ,ಮಾ.೯: ರಾಜ್ಯ ಸರ್ಕಾರ ಬಡವರು ಹಾಗೂ ಕೂಲಿ ಕಾರ್ಮಿಕರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸುವ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲ ಯುವ ಮೋರ್ಚಾ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಕೊಡಗು ಜಿಲ್ಲೆಯಲ್ಲಿ ಸಾವಿರಾರು ಬಿಪಿಎಲ್ ಪಡಿತರ ಕಾರ್ಡ್ಗಳು ರದ್ದಾಗಿದ್ದು, ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ೯೭೫ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. ಬಿಪಿಎಲ್ ಕಾರ್ಡ್ಗಳನ್ನು ಹೊಂದಲು ಅರ್ಹವಾಗಿರುವ ನೂರಾರು ಕುಟುಂಬಗಳು ತಮ್ಮ ಪಡಿತರ ಚೀಟಿಯನ್ನು ಕಳೆದುಕೊಂಡು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಅಸಹಾಯಕತೆಯಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಗ್ರಾಮೀಣ ಭಾಗದಲ್ಲಿ ಕೂಡ ರೈತರ ಪಡಿತರ ಕಾರ್ಡ್ಗಳು ರದ್ದಾಗಿವೆ. ತಾಲೂಕಿನ ಚೌಡ್ಲು ಗ್ರಾ. ಪಂ. ವ್ಯಾಪ್ತಿಯಲ್ಲಿ ೯೫, ಶನಿವಾರಸಂತೆಯಲ್ಲಿ ೯೨, ಕೊಡ್ಲಿಪೇಟೆಯಲ್ಲಿ ೬೮, ಶಾಂತಳ್ಳಿಯಲ್ಲಿ ೬೩, ಗೌಡಳ್ಳಿಯಲ್ಲಿ ೫೫, ಮಾದಾಪುರದಲ್ಲಿ ೫೧, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ೮೩ ಸೇರಿದಂತೆ ಸೋಮವಾರಪೇಟೆ ತಾಲೂಕಿನಲ್ಲಿ ಸುಮಾರು ೯೭೫ ಕಾರ್ಡ್ಗಳನ್ನು ಅವೈಜ್ಞಾನಿಕವಾಗಿ ಅನರ್ಹಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಪಿಎಲ್ ಕಾರ್ಡ್ಗಳನ್ನು ಹೊಂದಲು ಬೇಕಿರುವ ಮಾನದಂಡವನ್ನು ಕೊಡಗು ಜಿಲ್ಲೆಗೆ ಸ್ವಲ್ಪ ರಿಯಾಯಿತಿ ಮಾಡಬೇಕು. ಬಡ ರೈತರು, ಗಾರೆ ಕೆಲಸದವರು, ಕೂಲಿ ಕಾರ್ಮಿಕರು, ತಮ್ಮ ತೋಟ-ಗದ್ದೆ ಹಾಗೂ ಕೂಲಿ ಕೆಲಸಕ್ಕೆ ಹೋಗಲು ಸಾಲ ಮಾಡಿ ‘ಸೆಕೆಂಡ್ ಹ್ಯಾಂಡ್’ ಕಾರನ್ನು ಖರೀದಿಸಿದ್ದು, ಇಂತಹವರ ಕಾರ್ಡ್ಗಳು ರದ್ದಾಗದಂತೆ ಸರ್ಕಾರ ಕ್ರಮವಹಿಸಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಹಾಗೂ ಕಾಡು ಪ್ರಾಣಿಗಳ ಹಾವಳಿ, ಅತಿಯಾದ ಮಳೆ ಗುಡ್ಡಗಾಡು ಪ್ರದೇಶ ಹೆಚ್ಚಿರುವುದರಿಂದ ದೂರದ ಊರುಗಳಿಗೆ ಕೆಲಸಕ್ಕೆ ತೆರಳಿ ನಂತರ ಮನೆಗೆ ಹಿಂತಿರುಗುವುದಕ್ಕೆ ದ್ವಿಚಕ್ರ ವಾಹನದಲ್ಲಿ ಸಾಧ್ಯವಾಗದೆ ಇರುವ ಕಾರಣ, ಕೆಲವೆಡೆ ಕಾಡು ಪ್ರಾಣಿಗಳ ಭಯವೂ ಇರುವುದರಿಂದ ಕಾರನ್ನು ಖರೀದಿಸುವುದು ಅನಿವಾರ್ಯವಾಗಿದೆ. ‘ಸೆಕೆಂಡ್ ಹ್ಯಾಂಡ್’ ಕಾರು ಇದೆ ಎಂಬ ಕಾರಣಕ್ಕೆ ಬಿಪಿಎಲ್ ರದ್ದುಪಡಿಸಬಾರದು ಎಂದು ಮಹೇಶ್ ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈವರೆಗೂ ಬಿಪಿಎಲ್ ಕಾರ್ಡ್ ನೋಂದಣಿ ಮಾಡಲು ಅವಕಾಶ ಕಲ್ಪಿಸಿಲ್ಲ. ಹೊಸ ಕಾರ್ಡ್ಗಳನ್ನು ನೀಡಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪೂರೈಸಲು ಆಗದೆ ಇರುವುದರಿಂದ ಇಂತಹ ತಂತ್ರಗಾರಿಕೆ ನಡೆಸುತ್ತಿದೆ ಎಂದರು.

ನAತರ ಈ ಸಂಬAಧಿತ ಮನವಿಯನ್ನು ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕೃಷ್ಣಮೂರ್ತಿ, ತಾಲೂಕಿನಲ್ಲಿ ಈವರೆಗೆ ೧೦೩೨ ಅರ್ಜಿಗಳನ್ನು ಅನರ್ಹಗೊಳಿಸಿ ಬಿಪಿಎಲ್ ನಿಂದ ಎಪಿಎಲ್ ಕಾರ್ಡ್ ಮಾಡಲಾಗಿದೆ. ಸರ್ಕಾರದ ನಿಯಮಾನುಸಾರ ಆದಾಯ ತೆರಿಗೆ ಪಾವತಿದಾರರು, ಅರೆ ಸರ್ಕಾರಿ ಉದ್ಯೋಗಿಗಳು, ೬ ಎಕರೆ ಗಿಂತ ಹೆಚ್ಚು ಜಮೀನು ಇರುವವರ ಕಾರ್ಡ್ಗಳನ್ನು ಎಪಿಎಲ್ ಮಾಡಲಾಗಿದೆ ಎಂದರು.

ಒAದು ವೇಳೆ ನಿಜವಾಗಿಯೂ ಬಿಪಿಎಲ್‌ಗೆ ಅರ್ಹರಾಗಿದ್ದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಇದ್ದು ನಂತರ ರದ್ದಾಗಿದ್ದಲ್ಲಿ ಅವರು ಮತ್ತೆ ಅಗತ್ಯ ದಾಖಲೆಗಳೊಂದಿಗೆ ೪೫ ದಿನದೊಳಗೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಈವರೆಗೆ ೨೫೫ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ೯೦ ಅರ್ಜಿಗಳನ್ನು ಉಪನಿರ್ದೇಶಕರ ಕಚೇರಿಗೆ ಕಳುಹಿಸಲಾಗಿದೆ. ಉಳಿದ ೧೬೫ ಅರ್ಜಿಗಳನ್ನು ಸ್ಥಳಪರಿಶೀಲಿಸಿ ಬಗೆಹರಿಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಯುವ ಮೋರ್ಚಾ ಸೋಮವಾರಪೇಟೆ ಮಂಡಲ ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಶರತ್ ಚಂದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನುಕುಮಾರ್ ರೈ, ಪಕ್ಷದ ಮುಖಂಡರಾದ ಬಿ.ಜೆ.ದೀಪಕ್, ಎಂ.ಬಿ. ಅಭಿಮನ್ಯುಕುಮಾರ್, ಹೆಚ್.ಕೆ. ಮಾದಪ್ಪ, ಎಸ್.ಆರ್. ಸೋಮೇಶ್, ಪಿ.ಕೆ. ಚಂದ್ರು, ದರ್ಶನ್ ಜೋಯಪ್ಪ, ಮೋಕ್ಷಿಕ್, ಶ್ರೀನಿಧಿ ಲಿಂಗಪ್ಪ, ಕಂಠಿ ಕಾರ್ಯಪ್ಪ, ಚಂದ್ರಶೇಖರ್ ಹೇರೂರು, ಶಿಶಿರ್, ಭಾಸ್ಕರ್ ನಾಯಕ್, ಎಂ.ಡಿ. ಕೃಷ್ಣಪ್ಪ, ಸವಿತಾ ಸತೀಶ್, ಮಂಜುಳಾ ಸುಬ್ರಮಣಿ, ಹೆಚ್.ಎನ್. ತಂಗಮ್ಮ, ಲೀಲಾ ನಿರ್ವಾಣಿ, ಪ್ರವೀಣ್, ಬಿ.ಎ. ಧರ್ಮಪ್ಪ ಸೇರಿದಂತೆ ಇತರರು ಇದ್ದರು.