ಮಡಿಕೇರಿ, ಮಾ. ೯: ಸಮಾಜ ಸ್ವಸ್ಥವಾಗಿಡಲು ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸಲಹೆ ಮಾಡಿದ್ದಾರೆ.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕೊಡಗು ಘಟಕ ವತಿಯಿಂದ ನಗರದ ರೆಡ್ಬ್ರಿಕ್ಸ್ ಇನ್ ಸತ್ಕಾರ ಸಭಾಂಗಣದಲ್ಲಿ ನಡೆದ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಅರಿವು ಕಾರ್ಯಕ್ರಮ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಾರೆ. ಆದ್ದರಿಂದ ಒಂದು ಕುಟುಂಬ ಸಮರ್ಪಕವಾಗಿ ನಡೆಯಬೇಕಿದ್ದಲ್ಲಿ ತಾಯಿ ಆರೋಗ್ಯ ಪೂರ್ಣವಾಗಿರಬೇಕು. ಇದರಿಂದ ಮಕ್ಕಳು ಹಾಗೂ ಕುಟುಂಬದ ನಿರ್ವಹಣೆ ಸುಗಮವಾಗಿ ಸಾಗಲು ಸಾಧ್ಯ. ಆಧುನಿಕ ಶರವೇಗದ ಜಗತ್ತಿನಲ್ಲಿ ಆಹಾರ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಕಲುಷಿತತೆಯನ್ನು ಕಾಣಬಹುದಾಗಿದೆ. ಆದ್ದರಿಂದ ಶುದ್ದ ಕುಡಿಯುವ ನೀರು, ಮನೆಯಲ್ಲಿಯೇ ಬೇಯಿಸಿದ ಆಹಾರ ಉಪಯೋಗಿಸುವುದರಿಂದ ಆರೋಗ್ಯದತ್ತ ಗಮನಹರಿಸಬಹುದಾಗಿದೆ ಎಂದು ಹೇಳಿದರು.
ಮಹಿಳೆ ಆರೋಗ್ಯವಾಗಿದ್ದಲ್ಲಿ ಇಡೀ ಕುಟುಂಬ ಉತ್ತಮವಾಗಿ ಸಾಗಲಿದೆ. ಇದರಿಂದ ಸಮಾಜಕ್ಕೂ ಸಹ ಒಳ್ಳೆಯದಾಗಲಿದೆ. ಆ ನಿಟ್ಟಿನಲ್ಲಿ ಆರೋಗ್ಯದ ಕಡೆ ನಿಗಾವಹಿಸಬೇಕು. ಸೃಷ್ಟಿಯ ಅದ್ಭುತಗಳಲ್ಲಿ ಮಹಿಳೆಯರು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದಾರೆ. ಸಂಸಾರದ ನೊಗ ಮುಂದೆ ಸಾಗಲು ಮಹಿಳೆಯರು ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಇದರಿಂದ ಕುಟುಂಬ ನಿರ್ವಹಣೆ ಉತ್ತಮವಾಗಿರುತ್ತದೆ. ಮಹಿಳೆಯರಿಗೆ ತಾಳ್ಮೆ, ಸಹನೆ, ಸಹನಾಭೂತಿ ಹೆಚ್ಚು ಇರುವುದನ್ನು ಕಾಣಬಹುದು. ಮಹಿಳೆಯರು ಒಂದು ರೀತಿ ಆದಿಶಕ್ತಿ ಇದ್ದಂತೆ ಎಂದು ವರ್ಣಿಸಿದರು.
ಪ್ರಪಂಚಕ್ಕೆ ಜೀವಶಕ್ತಿ, ಆತ್ಮಶಕ್ತಿ ಹೆಣ್ಣು ಎಂದರೆ ತಪ್ಪಾಗಲಾರದು. ಸೃಷ್ಟಿಗೆ ಮೂಲ ಕಾರಣಕರ್ತಳು ಹೆಣ್ಣು ಮೂಲವಾಗಿದ್ದು, ಹೆಣ್ಣು ಮಕ್ಕಳನ್ನು ರಕ್ಷಿಸಬೇಕು ಮತ್ತು ಗೌರವಿಸಬೇಕು. ಸಾಮಾಜಿಕವಾಗಿ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಸಹ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಹಲ್ಯಾ ಬಾಯಿ. ಝಾನ್ಸಿರಾಣಿ ಲಕ್ಷಿö್ಮಬಾಯಿ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿಚೆನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಸಂಚಿಹೊನಮ್ಮ ಹೀಗೆ ಹಲವರನ್ನು ಉದಾಹರಣೆಯಾಗಿ ಕಾಣಬಹುದಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಹೆಣ್ಣು ಸಮಾಜದ ಕಣ್ಣು ಆಗಿದ್ದು, ಪುರಾತನ ಕಾಲದಿಂದಲೂ ಹೆಣ್ಣಿಗೆ ತನ್ನದೇ ಆದ ಮಹತ್ತರ ಸ್ಥಾನವಿದೆ. ಮಹಿಳೆಯರು ರಾಜಕೀಯ, ಸಾಮಾಜಿಕ, ಕ್ರೀಡೆ, ಸಿನಿಮಾ, ಗಗನಯಾನ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡಿದ್ದಾರೆ. ಇದಕ್ಕೆ ಕುಟುಂಬ ಹಾಗೂ ಎಲ್ಲರ ಸಹಕಾರ ಹೆಚ್ಚಿನ ಪ್ರೋತ್ಸಾಹ ನೀಡಿದೆ. ಸರ್ಕಾರ ಮಹಿಳೆಯರಿಗೆ ಹಲವು ಕಾರ್ಯಕ್ರಮ ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಸಮಾಜವನ್ನು ಶಕ್ತಿಯಾಗಿ ನಿರ್ಮಿಸುವಲ್ಲಿ ಮಹಿಳೆಯರು ಮುಂದೆ ಸಾಗಿದ್ದಾರೆ ಎಂದು ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಲಿಂಗಾನುಪಾತ ಉತ್ತಮವಾಗಿದೆ. ಸಮ ಸಮಾಜ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಹೆಚ್ಚಿನದ್ದಾಗಿದೆ. ಪ್ರತೀ ಕ್ಷೇತ್ರದಲ್ಲೂ ಸಹ ಮಹಿಳೆಯರು ಇದ್ದು, ಇದರಿಂದ ಸಮಾನತೆ ಕಾಣಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಷ್ಟç ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ, ಮಹಿಳೆಯರು ಕುಟುಂಬದ ನಿರ್ವಹಣೆಯ ಜೊತೆಗೆ ಕಚೇರಿಯಲ್ಲೂ ಕೆಲಸ ಮಾಡಿಕೊಂಡು ಜೀವನ ನಿಭಾಯಿಸುವುದು ದೊಡ್ಡ ಸಾಧನೆ. ಮಹಿಳೆಯರು ಸಂಬಳ ಇರದೆ ಇಡೀ ಕುಟುಂಬವನ್ನು ಉತ್ತಮವಾಗಿ ಸಾಗಿಸುವಲ್ಲಿ ಪ್ರಯತ್ನಿಸುತ್ತಾರೆ. ಹಾಗಾಗಿ ಹೆಣ್ಣನ್ನು ಗೌರವಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಮಾತನಾಡಿ, ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಪ್ರಯುಕ್ತ ಕ್ಯಾನ್ಸರ್ ತಪಾಸಣಾ ಶಿಬಿರ ಹಾಗೂ ಅರಿವು ಕಾರ್ಯಕ್ರಮ ಏರ್ಪಡಿಸಿರುವುದು ವಿಶೇಷವಾಗಿದೆ ಎಂದರು.
ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ೭೪ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರೆಡ್ಕ್ರಾಸ್ ಸಂಸ್ಥೆಯು ಪ್ರಾಕೃತಿಕ ವಿಕೋಪ, ಲಾಕ್ಡೌನ್ ಸೇರಿದಂತೆ ಅಗತ್ಯ ಇದ್ದಂತಹ ಸಂದರ್ಭದಲ್ಲಿ ತುರ್ತು ಕಾರ್ಯ ಪ್ರವೃತ್ತವಾಗಿ ಜನರ ಸೇವೆ ಮಾಡುತ್ತಾ ಬಂದಿದೆ ಎಂದರು.
ರೆಡ್ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಜಿಲ್ಲೆಯಾದ್ಯಂತ ಮಕ್ಕಳ ಪಾಲನೆ ಪೋಷಣೆಯೊಂದಿಗೆ ಸರ್ಕಾರದ ವಿವಿಧ ಕರ್ತವ್ಯಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಇಂತಹ ಸಿಬ್ಬಂದಿಯನ್ನು ಆದ್ಯತೆಯಾಗಿರಿಸಿ, ಆರೋಗ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಹಿಳಾ ದಿನಾಚರಣೆ ಹಿನ್ನೆಲೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ೪೬೦ ಮಹಿಳೆಯರು ಪಾಲ್ಗೊಂಡಿರುವುದು ರೆಡ್ಕ್ರಾಸ್ ಪ್ರಯತ್ನಕ್ಕೆ ಸಂದ ಫಲವಾಗಿದೆ ಎಂದು ತಿಳಿಸಿದರು.
ರಾಷ್ಟç ಪ್ರಶಸ್ತಿ ಪಡೆದ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ರೆಡ್ಕ್ರಾಸ್ ಸಂಸ್ಥೆ ವತಿಯಿಂದ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಮಡಿಕೇರಿ ತಾಲೂಕಿನ ೧೫ ಮಂದಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಸನ್ಮಾನಿಸಲಾಯಿತು. ವಿವಿಧ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ತಂಡದವರು ವೈವಿಧ್ಯಮಯ ಕಾರ್ಯಕ್ರಮ ನೀಡಿ ಮನ ಸೆಳೆದರು.
ಇದೇ ಸಂದರ್ಭದಲ್ಲಿ ತಜ್ಞ ವೈದ್ಯರಿಂದ ಆಯೋಜಿತ ಕ್ಯಾನ್ಸರ್ ತಪಾಸಣಾ ಶಿಬಿರದ ಪ್ರಯೋಜನವನ್ನು ಮಹಿಳೆಯರು ಪಡೆದರು.
ಮಹಿಳಾ ಸಂಬAಧಿಸಿದ ವಿಚಾರಗೋಷ್ಠಿಯಲ್ಲಿ ಮಿಲನ ಭರತ್, ಡಾ.ಬಿ.ಕೆ.ರಾಜೇಶ್ವರಿ, ವೈದ್ಯಾಧಿಕಾರಿ ಡಾ.ಸುಮುಖ್, ವಕೀಲರಾದ ಸಿಂಧೂರ ಎನ್.ಸ್ವಾಮಿ, ಯೋಗ ಶಿಕ್ಷಕರಾದ ಶಿಲ್ಪ ರೈ ಅವರು ಮಾತನಾಡಿದರು. ಶೀಲ ಅಶೋಕ್ ಪ್ರಾರ್ಥಿಸಿದರು. ರೆಡ್ಕ್ರಾಸ್ ಸಂಸ್ಥೆಯ ಕೊಡಗು ಘಟಕ ಉಪ ಸಭಾಪತಿ ಅನಿಲ್ ಎಚ್.ಟಿ. ನಿರೂಪಿಸಿದರು, ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಧನAಜಯ ಸ್ವಾಗತಿಸಿದರು, ಖಜಾಂಜಿ ಪ್ರಸಾದ್ ಗೌಡ ವಂದಿಸಿದರು.