ಮಡಿಕೇರಿ, ಮಾ. ೧೧: ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವಸ್ಥಾನದ ವಾರ್ಷಿಕ ಹಬ್ಬ ತಾ. ೧೨ ಹಾಗೂ ೧೩ ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಬೊಟ್ಟಿಯತ್ ನಾಡ್ ತಕ್ಕಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಪೊನ್ನಂಪೇಟೆ ಸಮೀಪದ ಕುಂದಾ ಮುಗುಟಗೇರಿ ಗ್ರಾಮದಲ್ಲಿರುವ ನಾಡ್ ದೇವಸ್ಥಾನ ಎಂದು ಖ್ಯಾತಿ ಪಡೆದಿರುವ ಶ್ರೀ ಈಶ್ವರ ದೇವಸ್ಥಾನದಲ್ಲಿ ಮಾರ್ಚ್ ೫ ರಂದು ಕೊಡಿಮರ ನಿಲ್ಲಿಸುವ ಮೂಲಕ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಗಿದ್ದು, ತಾ. ೧೨ ರಂದು ಸಂಜೆ ನೆರಪು ಹಾಗೂ ತಾ. ೧೩ ರಂದು ಸಂಜೆ ದೇವರ ಜಳಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಬೊಟ್ಟಿಯತ್ ನಾಡಿನ ಆರು ಗ್ರಾಮಗಳಾದ ಕುಂದಾ, ಮುಗುಟಗೇರಿ, ಹುದೂರು, ಹಳ್ಳಿಗಟ್ಟು, ಈಚೂರ್ ಹಾಗೂ ಅರ್ವತೋಕ್ಲು ಗ್ರಾಮಗಳಿಗೆ ಸೇರಿದ ನಾಡ್ ದೇವಸ್ಥಾನ ಎಂದೇ ಖ್ಯಾತಿ ಹೊಂದಿರುವ ಶ್ರೀ ಈಶ್ವರ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದ್ದು ಕುಂದಾ ಬೆಟ್ಟದ ತಪ್ಪಲಿನಲ್ಲಿರುವ ಈ ದೇವಸ್ಥಾನಕ್ಕೆ ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬಸ್ಥರು ತಕ್ಕಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.