ಸಿದ್ದಾಪುರ, ಮಾ. ೧೭: ಕಾಫಿ ತೋಟದಿಂದ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ನಾಟಾಗಳನ್ನು ಮಾಡಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಪತ್ತೆಹಚ್ಚಿದೆ. ಲಾರಿ ಹಾಗೂ ಮರದ ನಾಟಾಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಕದನೂರು ಗ್ರಾಮದ ನಿವಾಸಿ ಪಿ.ಎನ್. ನವೀನ್ ಸೋಮಣ್ಣ ಎಂಬವರ ಕಾಫಿ ತೋಟದಿಂದ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಸಂದರ್ಭ ಆರೋಪಿಗಳು ಪರಾರಿಯಾಗಿದ್ದು, ಮಾಲು ಹಾಗೂ ಸ್ವರಾಜ್ ಮಜ್ದಾ ವಾಹನವನ್ನು (ಕೆ.ಎ.-೨೧-ಸಿ-೮೪೬೪) ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಇದರೊಂದಿಗೆ ಕೃತ್ಯಕ್ಕೆ ಬೆಂಗಾವಲಾಗಿ ಬರುತ್ತಿದ್ದ ದ್ವಿಚಕ್ರ ವಾಹನವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಗಳು ನಾಪೋಕ್ಲು ಭಾಗದವರು ಎಂದು ಗುರುತಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಎನ್ ಹೆಚ್. ಹಾಗೂ ಎ.ಸಿ.ಎಫ್. ತಹಸೀನ್ ಮಾರ್ಗದರ್ಶನದಲ್ಲಿ, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಪಿ.ಜೆ. ರಾಘವ, ಹೆಚ್.ಸಿ. ಶ್ರೀನಿವಾಸ್, ಟಿ.ಜಿ. ಲೋಕೇಶ್ ಸಿಬ್ಬಂದಿ ನಂದೀಶ್, ಹರೀಶ್, ಮಹೇಶ್, ಸುರೇಶ್, ಮುರುಗ, ಅನಿಲ್, ಮೊಣ್ಣಪ್ಪ, ಹರ್ಷಿತ್ ಪಾಲ್ಗೊಂಡಿದ್ದರು. ಮರಗಳನ್ನು ಕಡಿದು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ತೋಟದ ಮಾಲೀಕ ನವೀನ್ ಸೋಮಣ್ಣ ಹಾಗೂ ಸಾಗಾಟ ಮಾಡಿದ ಆರೋಪದಡಿ ನಾಪೋಕ್ಲು ನಿವಾಸಿ ಹನೀಫ್ ಹಾಗೂ ಇತರರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.