ಶನಿವಾರಸಂತೆ, ಮಾ. ೧೭: ತಾಲೂಕಿನಲ್ಲಿ ಮಹಿಳಾ ಸಬಲೀಕರಣದ ಬೆಳವಣಿಗೆಗೆ ಪೂರಕವಾಗಿ ಮಲ್ಲಳ್ಳಿಫಾಲ್ಸ್, ಟಿ.ಪಿ, ಕೆಫೆ, ಕ್ಯಾಂಟೀನ್, ಚಿಕ್ಲಿ ಹೊಳೆ, ಬಸವನಹಳ್ಳಿಗಳಲ್ಲಿ ೪ ಕ್ಯಾಂಟೀನ್‌ಗಳು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುತ್ತಿವೆ ಎಂದು ಸೋಮವಾರಪೇಟೆ/ಕುಶಾಲನಗರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸೋಮವಾರಪೇಟೆಯ ಸ್ತಿçÃಶಕ್ತಿ ಭವನದಲ್ಲಿ ಸೋಮವಾರಪೇಟೆ/ಕುಶಾಲನಗರ ತಾಲೂಕು ಪಂಚಾಯಿತಿ ಹಾಗೂ ಎನ್.ಆರ್,ಎಲ್.ಎಂ, ತಂಡದ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
೨ ತಾಲೂಕುಗಳಲ್ಲಿ ಎನ್.ಆರ್.ಎಲ್.ಎಂ. ತಂಡದಲ್ಲಿ ೪,೬೭೮ ಸದಸ್ಯರಿದ್ದು, ವಿವಿಧ ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತಿರುತ್ತೇವೆ. ಸ್ವ ಉದ್ಯೋಗ, ಸ್ವಚ್ಛ ವಾಹಿನಿ, ಜೇನು ಸಾಕಾಣಿಕೆ ಇತ್ಯಾದಿ ಸ್ವಾವಲಂಭಿಗಳಾಗಿ ಉತ್ಪಾದನೆ ಮಾಡುವ ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.ಸ್ವ ಉದ್ಯೋಗದಡಿ ತಯಾರಾಗುವ ಉತ್ಪನ್ನಗಳು ಹೊರ ಜಿಲ್ಲೆ, ರಾಜ್ಯಗಳಲ್ಲೂ ಪ್ರದರ್ಶನವಾಗಿ ಮಾರಾಟವಾಗಬೇಕು ಎಂದರು.
ಮುಖ್ಯ ಅತಿಥಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಿ.ಎಂ. ಕಾಂತರಾಜ್ ಮಾತನಾಡಿ, ಇಂದು ಶಿಕ್ಷಣ ಮಹಿಳೆಯರ ಬದುಕಿನ ದಿಕ್ಕನ್ನು ಬದಲಾಯಿಸಿದೆ. ಸಾಕ್ಷರಳಾಗುವುದರ ಜತೆಗೆ ಆರ್ಥಿಕ ಸ್ವಾತಂತ್ರ‍್ಯವೂ ಲಭಿಸಿ, ಬದುಕಿನಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು. ವಿಶೇಷ ಅತಿಥಿ ಕೂಡಿಗೆಯ ಸೈನಿಕ ಶಾಲೆಯ ಎನ್.ಸಿ.ಸಿ. ಅಧಿಕಾರಿ ಪ್ರತಿಭಾ ಕಲ್ಯಾಣಿ ಮಾತನಾಡಿ, ಸಮಾನತೆಗಾಗಿ ವಿದ್ಯಾವಂತಳಾಗಿ, ಸ್ವಾವಲಂಭಿಯಾಗಿ ದುಡಿಯುತ್ತಿರುವ ಮಹಳೆ ತನ್ನವರಿಗಾಗಿ, ಕುಟುಂಬಕ್ಕಾಗಿ ಮಾತ್ರವಲ್ಲ; ತನಗಾಗಿಯೂ ಆತ್ಮವಿಶ್ವಾಸದಿಂದ ನಿಲ್ಲಬೇಕು. ತಮ್ಮ ಜೀವನವನ್ನೂ ಆರ್ಥಿಕ ಸ್ವಾತಂತ್ಯದ ಮೂಲಕ ತೃಪ್ತಿದಾಯಕವಾಗಿ ಮಾಡಿಕೊಳ್ಳಬೇಕು ಎಂದರು.
ಮತ್ತೋರ್ವ ವಿಶೇಷ ಅತಿಥಿ ಸಾಹಿತಿ/ಪತ್ರಕರ್ತೆ ಶ.ಗ. ನಯನತಾರಾ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಸಾಮಾಜಿಕ ಬದಲಾವಣೆಯ ಮೂಲವಾಗುತ್ತಿದ್ದು, ನಾಗರಿಕ ಜೀವನದಲ್ಲಿ ಮಹಿಳೆ ಬದಲಾಗುತ್ತಿದ್ದಾಳೆ. ವಿವಿಧ ಕ್ಷೇತ್ರಗಳಲ್ಲಿ ಪುರುಷನಿಗೆ ಸರಿಸಮಾನಳಾಗಿ ದುಡಿಯುತ್ತಿರುವ ಮಹಿಳೆಗೆ ಇನ್ನಷ್ಟು ಮುಕ್ತ ವಾತಾವರಣ, ಅವಕಾಶ ದೊರೆತರೆ “ಹೆಣ್ಣು’’ ಎಂಬ ಸ್ಥಿತಿಯ ಕುರಿತಾದ ಸಾಮಾಜಿಕ ಪರಿಕಲ್ಪನೆ ಬದಲಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ಎನ್.ಸಿ.ಸಿ.ಅಧಿಕಾರಿ ಪ್ರತಿಭಾ ಕಲ್ಯಾಣಿ, ಸಾಹಿತಿ ಶ.ಗ. ನಯನತಾರಾ, ಸ್ವಚ್ಛವಾಹಿನಿ ಚಾಲಕರಾಗಿ ಸಾಧನೆಗೈದ ಸವಿತಾ, ಸುನೀತಾ, ಬಿಂದು, ಜೇನು ಸಾಕಾಣಿಕೆಯಲ್ಲಿ ಸಾಧನೆ ಗೈದ ಉಷಾ, ಸ್ವ ಉದ್ಯೋಗದಡಿ ಕ್ಯಾಂಟೀನ್ ನಡೆಸುತ್ತಿರುವ ಪ್ರಮೀಳಾರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೋಮವಾರಪೇಟೆ ತಾಲ್ಲೂಕು ಒಕ್ಕೂಟದ ಅಧ್ಯಕ್ಷೆ ಜಾನಕಿ, ಕುಶಾಲನಗರ ತಾಲೂಕು ಒಕ್ಕೂಟದ ಅಧ್ಯಕ್ಷೆ ವಂದನಾ, ಡಿ.ಎಂ.ಐ.ಎಸ್. ಸಂಯೋಜಕಿ ಗಾಯತ್ರಿ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಸಂತೆ ಮೇಳದಲ್ಲಿ ಮಳಿಗೆಗಳನ್ನು ತೆರೆದು ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿ, ಮಾರಾಟ ಮಾಡಿ ಗಮನ ಸೆಳೆದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ರಂಜಿಸಿದರು.