ಸಿದ್ದಾಪುರ, ಮಾ. ೧೭: ಕಾಫಿ ತೋಟದಿಂದ ಅಕ್ರಮವಾಗಿ ತೇಗದ ಮರವನ್ನು ಕಡಿದು ಸಾಗಾಟ ಮಾಡಿದ ಪ್ರಕರಣದಲ್ಲಿ ನಾಲ್ಕು ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುಹ್ಯ ಗ್ರಾಮದ ಮರ ವ್ಯಾಪಾರಿ ಆಶೀಫ್ ಕೆ.ಎ. (೩೧), ಮಂಗಳೂರಿನ ಬಂಟ್ವಾಳ ನಿವಾಸಿ ಅಬ್ಬಾಸ್ (೫೧), ಅಭ್ಯತ್ಮಂಗಲ ನಿವಾಸಿ ಅಯ್ಯಪ್ಪ (೪೦) ಹಾಗೂ ಲಾರಿ ಚಾಲಕ ಮಂಗಳೂರು ಬಂಟ್ವಾಳ ನಿವಾಸಿ ಅನ್ಸಾರಿ (೩೮) ಬಂಧಿತ ಆರೋಪಿಗಳು.
ನೆಲ್ಲಿಹುದಿಕೇರಿ ಗ್ರಾಮದ ಸಮೀಪದ ಅತ್ತಿಮಂಗಲ ಬಳಿಯ ಅರೆಕಾಡು ರಸ್ತೆಯ ನಿವಾಸಿ ಎ. ಕವಿತಾ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿದ್ದ ೫ ತೇಗದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಿದ ಬಗ್ಗೆ ಕವಿತಾ ಅವರು ಸಿದ್ದಾಪುರ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಹಾಗೂ ಮಡಿಕೇರಿ ವಿಭಾಗದ ಡಿವೈಎಸ್ಪಿ ಸೂರಜ್, ವೃತ್ತ ನಿರೀಕ್ಷಕ ರಾಜು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್, ಸಹಾಯಕ ಠಾಣಾಧಿಕಾರಿ ಶ್ರೀನಿವಾಸ್, ಅಪರಾಧ ಪತ್ತೆದಳದ ಸಿಬ್ಬಂದಿ ಮಣಿಕಂಠ, ರಾಜೇಶ್ ಪಾಲ್ಗೊಂಡಿದ್ದರು.