ಕಣಿವೆ, ಮಾ. ೧೭: ಹೊಲಗದ್ದೆಗಳಲ್ಲಿ ಕಷ್ಟ ಪಟ್ಟು ಕೃಷಿ ಮಾಡುವ ಅನ್ನದಾತರಿಗೆ ಸೋಮವಾರ ಸುರಿದ ಮೊದಲ ವರ್ಷಾಧಾರೆ ಸಂಕಟ ಉಂಟುಮಾಡಿದೆ.
ಅನೇಕ ವರ್ಷಗಳಿಂದ ಆರೈಕೆ ಮಾಡಿ ಬೆಳೆಸಿದ್ದ ಕಾಳು ಮೆಣಸು ಬಳ್ಳಿಗಳು ನೆಲಕಚ್ಚಿವೆ. ಅಡಿಕೆ, ತೆಂಗಿನ ಮರಗಳು ಅಂಗಾತ ಬಿದ್ದಿವೆ. ಸಾಲ ಸೋಲ ಮಾಡಿ ಬೆಳೆದಿದ್ದ ಕೆಸ, ಸಿಹಿ ಗೆಣಸು, ಜೋಳದ ಬೆಳೆಗಳು ಹಾಳಾಗಿವೆ.
ಸೋಮವಾರ ಸಂಜೆ ಬೀಸಿದ ಗಾಳಿ ಹಾಗೂ ಸುರಿದ ಆಲಿಕಲ್ಲು ಮಳೆಗೆ ತೊರೆನೂರು, ಚಿಕ್ಕನಾಯಕನಹೊಸಳ್ಳಿ, ಶಿರಂಗಾಲ, ಮಣಜೂರು ಮೊದಲಾದ ಗ್ರಾಮಗಳ ಕೃಷಿಕರ ವರ್ಷದ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ಕಂದಾಯ, ತೋಟಗಾರಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಷ್ಟಕ್ಕೊಳಗಾದ ಕೃಷಿಕರಿಗೆ ನ್ಯಾಯೋಚಿತವಾದ ಪರಿಹಾರ ಒದಗಿಸಬೇಕೆಂದು ತೊರೆನೂರು ರೈತ ಮುಖಂಡ ಟಿ.ಎಲ್.ಮಹೇಶ್, ಟಿ.ಸಿ. ಶಿವಕುಮಾರ್, ಸುನಿಲ್ ಚಿದಾನಂದ ಮುಂತಾದವರು ಕುಶಾಲನಗರ ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ. ಈ ಬಾರಿ ಮಾರ್ಚ್ ಆರಂಭದಿAದಲೂ ಕಾಡುತ್ತಿದ್ದ ಬಿಸಿಲ ತಾಪಕ್ಕೆ ಬೆಳೆದ ಬೆಳೆಗಳು ಒಣಗಲಾರಂಭಿಸಿದ್ದವು.
ಆದಾಗ್ಯೂ ನೀರಿಲ್ಲದೇ ತಳಸೇರಿದ್ದ ಕೊಳವೆ ಬಾವಿಗಳನ್ನು ಮತ್ತೆ ನೂರಾರು ಅಡಿಗಳಷ್ಟು ಆಳಕ್ಕೆ ಕೊರೆಸಿ ಸರಿಪಡಿಸಿ ನೀರನ್ನು ಮೇಲೆತ್ತಿ ಬೆಳೆಗಳನ್ನು ಬೆಳೆಯಲು ಮುಂದಾದ ಈ ಭಾಗದ ಕೃಷಿಕರಿಗೆ ಆದಾಯಕ್ಕಿಂತ ನಷ್ಟವೇ ಅಧಿಕವಾಗಿರುವುದರಿಂದ ಕೂಡಲೇ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಕೃಷಿಕರತ್ತ ಗಮನ ಹರಿಸಬೇಕು, ನೆರವಿಗೆ ಧಾವಿಸಬೇಕು ಎಂದು ಗ್ರಾಪಂ ಉಪಾಧ್ಯಕ್ಷರೂ ಆದ ತೊರೆನೂರಿನ ಪ್ರಗತಿಪರ ಕೃಷಿಕ ಮಹಿಳೆ ರೂಪ ಮಹೇಶ್ ಒತ್ತಾಯಿಸಿದ್ದಾರೆ.
ಬೆಳೆ ಕಳೆದುಕೊಂಡ ಕೃಷಿಕರನ್ನು ಕಚೇರಿಗಳಿಗೆ ಅಲೆಸಿ ಮತ್ತಷ್ಟು ಸತಾಯಿಸುವ ಕೆಲಸ ಆಗಬಾರದು. ಸ್ಥಳದಿಂದಲೇ ಸೂಕ್ತ ಪರಿಹಾರವನ್ನು ದೊರಕಿಸುವ ಪ್ರಕ್ರಿಯೆ ಆಗಬೇಕು. ಸಂಕಷ್ಟದಲ್ಲಿರುವ ಅನ್ನದಾತರ ಕೈಹಿಡಿಯಬೇಕು ಎಂದು ಅವರು ವಿನಂತಿಸಿದ್ದಾರೆ.