ಸಿದ್ದಾಪುರ, ಮಾ. ೨೧: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಚೆಂಬೆಬೆಳ್ಳೂರು, ದೇವಣಗೇರಿ, ಬೆಳ್ಳರಿಮಾಡು, ಕುಕ್ಲೂರು, ಪೊದಕೋಟೆ, ಐಮಂಗಲ, ಮೈತಾಡಿ, ಕದನೂರು, ಬಿಳುಗುಂದ, ಹಾಲುಗುಂದ ಹಾಗೂ ಅಮ್ಮತಿ ಹೋಬಳಿಯಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿರುವ ಆನೆಗಳ ಪೈಕಿ ಒಂಟಿ ಸಲಗದ ಸೆರೆ ಕಾರ್ಯಾಚರಣೆ ತಾ. ೨೨ ರಿಂದ (ಇಂದು) ನಡೆಯಲಿದೆ.
ಬೆಳಿಗ್ಗೆ ೮ ಗಂಟೆಯಿAದ ರಾತ್ರಿ ೭ ರವರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಯಲಿದ್ದು, ಕಾರ್ಯಾಚರಣೆಯಲ್ಲಿ ಕಾಡಾನೆಗಳ ಸೆರೆ ಹಿಡಿಯುವಲ್ಲಿ ಅನುಭವ ಹೊಂದಿರುವ ಸಾಕಾನೆಗಳಾದ ಅಭಿಮನ್ಯು ಮಹೇಂದ್ರ, ಕಂಜನ್, ಭೀಮಾ, ಸುಗ್ರೀವ, ಹರ್ಷ ಸಾಥ್ ನೀಡಲಿದೆ. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ, ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ವನ್ಯಜೀವಿ ವೈದ್ಯಾಧಿಕಾರಿ ಡಾ ರಮೇಶ್, ಶಾರ್ಪ್ ಶೂಟರ್ ಕುಶಾಲನಗರ ಉಪ ಅರಣ್ಯ ಅಧಿಕಾರಿ ಕನ್ನಂಡ ರಂಜನ್ ಹಾಗೂ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿ ನೂರಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಕಾಡಾನೆ ಸೆರೆಯ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾರ್ಮಿಕರು ಶಾಲಾ ಕಾಲೇಜು ಮಕ್ಕಳು ಸಾರ್ವಜನಿಕರು ಎಚ್ಚರಿಕೆ ಇರುವಂತೆ ಹಾಗೂ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಸಹಕರಿ ಸುವಂತೆ ಅರಣ್ಯ ಇಲಾಖೆ ಅಧಿಕಾರಿ ಶಿವರಾಮ್ ಮನವಿ ಮಾಡಿದ್ದಾರೆ.
ನಿರ್ಬಂಧಿತ ಪ್ರದೇಶ
ಕಾರ್ಯಾಚರಣೆ ನಡೆಯುವ ಗ್ರಾಮಗಳ ೫೦೦ ಮೀಟರ್ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶ ಎಂದು ಆದೇಶಿಸಿರುವ ತಹಶೀಲ್ದಾರ್ ಪ್ರವೀಣ್ ಕುಮಾರ್ ಪ್ರತಿಬಂಧಕಾಜ್ಞೆಯನ್ನು ವಿಧಿಸಿದ್ದಾರೆ.
ವೀರಾಜಪೇಟೆ ತಾಲೂಕು ವಿರಾಜಪೇಟೆ ಹೋಬಳಿಯ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಗೆ ಒಳಪಡುವ ಪೊದಕೋಟೆ, ಕುಕ್ಲೂರು, ಮಗ್ಗುಲ, ಐಮಂಗಲ, ದೇವಣಗೇರಿ, ಚೆಂಬೆಬೆಳ್ಳೂರು, ಬೆಳ್ಳರಿಮಾಡು ಗ್ರಾಮಗಳಲ್ಲಿ ಬೆಳಗ್ಗೆ ೬ ಗಂಟೆಯಿAದ ರಾತ್ರಿ ೧೦. ಗಂಟೆಯವರೆಗೆ ಕರ್ತವ್ಯ ನಿರತ ಅಧಿಕಾರಿ/ಸಿಬ್ಬಂದಿಗಳನ್ನು ಹೊರ ತುಪಡಿಸಿ ಯಾವುದೇ ಸಾರ್ವಜನಿಕರ ಪ್ರವೇಶವನ್ನು, ಓಡಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಯಾವುದೇ ರೀತಿಯ ಸಿಡಿಮದ್ದುಗಳು, ಗುಂಡು ಹಾರಿಸುವುದು, ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಸದರಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಹಾಗೂ ನಿರ್ಬಂಧಿತ ಪ್ರದೇಶದೊಳಗೆ ತರುವುದನ್ನು ನಿಷೇದಿಸಲಾಗಿದೆ. ಖಾಸಗಿ ವಾಹನಗಳ ಪ್ರವೇಶ, ನಿಲುಗಡೆ ಹಾಗೂ ಓಡಾಟವನ್ನು ನಿಷೇಧಿಸಿದೆ. ಕಾರ್ಯಾಚರಣೆಗೆ ಅಡಚಣೆ ಉಂಟಾಗುವ ರೀತಿಯಲ್ಲಿ ಕಿರುಚಾಡುವುದು, ವಾದ್ಯಗಳನ್ನು ನುಡಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.