ಮಡಿಕೇರಿ, ಮಾ.೨೩: ಅಪ್ಪಂಗಳದಲ್ಲಿರುವ ಐ.ಸಿ.ಎ.ಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆಯಲ್ಲಿ ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ-ಕೋಜಿಕೋಡು ಪ್ರಾಯೋಜಿತ “ಸುಸ್ಥಿರ ಕಾಳುಮೆಣಸು ಮತ್ತು ಶುಂಠಿ ಉತ್ಪಾದನೆಗೆ ಸುಧಾರಿತ ಕೃಷಿ-ತಂತ್ರಜ್ಞಾನಗಳು” ವಿಷಯದ ಬಗ್ಗೆ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಹೋಮಿ ಚೇರಿಯನ್ ಅವರು, ಡಿ.ಎ.ಎಸ್.ಡಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪರಿಚಯ ನೀಡಿದರು. ಮತ್ತು ಸಂಬಾರ ಬೆಳೆಗಳ ಮೌಲ್ಯವರ್ಧನೆಯ ಮಹತ್ವವನ್ನು ಒತ್ತಿ ಹೇಳಿದರು.

ಡಾ. ಆರ್. ದಿನೇಶ್ ಅವರು ಹವಾಮಾನ ಬದಲಾವಣೆಯ ಹಿನ್ನೆಲೆಗಳಲ್ಲಿ ಸುಧಾರಿತ ತಳಿಗಳು ಹಾಗೂ ಸುಸ್ಥಿರ ಉತ್ಪಾದನಾ ಪದ್ಧತಿಗಳ ಮಹತ್ವವನ್ನು ವಿವರಿಸಿದರು.

ತಾಂತ್ರಿಕ ಅಧಿವೇಶನದಲ್ಲಿ, ಅಪ್ಪಂಗಳದ ಹಿರಿಯ ವಿಜ್ಞಾನಿ ಡಾ. ಎಂ. ಎಸ್. ಶಿವಕುಮಾರ್ ಅವರು ಕಾಳುಮೆಣಸು ಮತ್ತು ಶುಂಠಿಯ ಸುಧಾರಿತ ತಳಿಗಳ ಕುರಿತು ಉಪನ್ಯಾಸ ನೀಡಿದರು.

ಕಾಳುಮೆಣಸಿನ ನರ್ಸರಿ ತಂತ್ರಜ್ಞಾನಗಳ ಕುರಿತು ಡಾ. ಎಚ್.ಜೆ ಅಕ್ಷಿತ ಅವರು ವಿವರಿಸಿದರು. ಡಾ.ಎಸ್.ಜೆ ಅಂಕೇಗೌಡ ಅವರು ಕಾಳುಮೆಣಸಿನ ವೈಜ್ಞಾನಿಕ ಕೃಷಿ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು.

ಡಾ.ವಿ ಶ್ರೀನಿವಾಸನ್ ಅವರು ಶುಂಠಿಯ ಉತ್ಪಾದನಾ ತಂತ್ರಜ್ಞಾನಗಳ ಕುರಿತು ಮಾತನಾಡಿದರು.

ಕರಿ ಮೆಣಸು ಮತ್ತು ಶುಂಠಿಯ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಡಾ. ಆರ್ ಪ್ರವೀಣ ಅವರು ಮಾಹಿತಿ ನೀಡಿದರು.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು ೧೫೦ ರೈತರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೈತರ ಪ್ರಯೋಜನಕ್ಕಾಗಿ ಸಂಸ್ಥೆಯು ಅಭಿವೃದ್ಧಿಪಡಿಸಿದ ಸಂಬಾರ ಬೆಳೆಗಳ ತಳಿಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಐಸಿಎಆರ್-ಐಐಎಸ್‌ಆರ್ ನಿರ್ದೇಶಕರಾದ ಡಾ. ಆರ್. ದಿನೇಶ್, ಬೆಳೆ ಉತ್ಪಾದನೆವಿಭಾಗದ ಮುಖ್ಯಸ್ಥರಾದ ಡಾ. ವಿ. ಶ್ರೀನಿವಾಸನ್, ಅಪ್ಪಂಗಳÀ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಎಸ್.ಜೆ ಅಂಕೇಗೌಡ ಮತ್ತು ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಜಿ.ಎ ರಾಜಣ್ಣ ಉಪಸ್ಥಿತರಿದ್ದರು. ಡಾ. ಜಿ. ಎ ರಾಜಣ್ಣ ಅವರು ಸ್ವಾಗತಿಸಿದರು. ಡಾ. ಎಚ್.ಜೆ ಅಕ್ಷಿತಾ ಅವರು ವಂದನಾರ್ಪಣೆ ಸಲ್ಲಿಸಿದರು.