ವೀರಾಜಪೇಟೆ, ಮಾ.೨೪: ವೀರಾಜಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಖಾಸಗಿ ಬಸ್ಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಖಾಸಗಿ ಬಸ್ ಕಾರ್ಮಿಕರ ಸಂಘದ ಖಜಾಂಚಿ ದಿನೇಶ್ ನಾಯರ್ ಆರೋಪಿಸಿದರು.
ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ನಿAದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ದಿನೇಶ್ ಅವರು, ದಿನನಿತ್ಯದ ಸಂಬಳಕ್ಕಾಗಿ ದುಡಿಯುವ ಕಾರ್ಮಿಕ ವರ್ಗದ ಬಸ್ ಚಾಲಕ ಮತ್ತು ನಿರ್ವಾಹಕರು ಇಲ್ಲಿದ್ದಾರೆ. ಬಸ್ ನಿಲ್ದಾಣದಲ್ಲಿ ಬಂದು ಅವರಿಗೆ ತಿನ್ನಲು ಕುಡಿಯಲು ಕೇವಲ ೫-೧೦ ನಿಮಿಷಗಳ ಕಾಲಾವಧಿ ಇರುತ್ತದೆ. ಅಂತಹ ಸಂದರ್ಭದಲ್ಲಿ ನಿಲ್ದಾಣದೊಳಗೆ ಖಾಸಗಿ ವಾಹನ ನಿಲುಗಡೆ ಮಾಡಿಕೊಂಡು ಬಸ್ ಚಾಲಕರಿಗೆ ತೊಂದರೆ ಮಾಡುತ್ತಿದ್ದಾರೆ. ಬಸ್ ತಿರುಗಿಸುವಾಗ ಅಚಾನಕ್ಕಾಗಿ ಯಾವುದಾದರೂ ವಾಹನಕ್ಕೆ ತಾಗಿದರೆ ಚಾಲಕರ ಮೇಲೆ ತಪ್ಪು ಹೊರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಒಂದು ಸಾಲಿನಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕೊಡಲಾಗಿತ್ತು. ಇದೀಗ ಮೂರು-ನಾಲ್ಕು ಸಾಲುಗಳಲ್ಲಿ ವಾಹನ ನಿಲುಗಡೆ ಮಾಡಿಕೊಂಡು ಬಸ್ನವರಿಗೆ ಸಮಸ್ಯೆ ಮಾಡಲಾಗುತ್ತಿದೆ. ಇದರ ಬಗ್ಗೆ ಪುರಸಭೆ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ಪುರಸಭೆಗೆ ಮನವಿ ಮಾಡಿದ್ದರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ನೀಡಿರುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಂಘಧ ನಿರ್ದೇಶಕರಾದ ಜೂಡಿವಾಸ್ ಮಾತನಾಡಿ, ಪುರಸಭೆಯ ವಾಹನ ಶುಲ್ಕ ಎತ್ತುವಳಿ ಸಂದರ್ಭ ಬಸ್ ನಿಲ್ದಾಣದಲ್ಲಿನ ವಾಹನ ನಿಲುಗಡೆಯ ಶುಲ್ಕ ಎತ್ತುವಳಿ ಕೈಬಿಡಬೇಕು. ಇಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಪುರಸಭೆ ಅಧಿಕಾರಿಗಳು ಈ ಕುರಿತು ಗಮನಹರಿಸಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬಾರದು ಎಂದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಕಿಶನ್, ಸುರೇಶ್, ನಿರ್ದೇಶಕ ಮಹೇಶ್ ಇದ್ದರು.