ಸೋಮವಾರಪೇಟೆ, ಮಾ. ೨೪: ಪಶ್ಚಿಮ ಏಷ್ಯಾ ಸಂಘರ್ಷವು ಅಡುಗೆ ಅನಿಲದ ಮೇಲೂ ಪರಿಣಾಮ ಬೀರಿರುವುದರಿಂದ ಸೋಮವಾರಪೇಟೆ ಭಾಗದಲ್ಲಿ ಅಡುಗೆ ಅನಿಲದ ಸಿಲಿಂಡರ್ಗಳಿಗೆ ಗ್ರಾಹಕರು ಪರದಾಡುತ್ತಿದ್ದಾರೆ.
ವಾಣಿಜ್ಯ ಬಳಕೆಯ ಸಿಲಿಂಡರ್ಗಳು ಸಕಾಲದಲ್ಲಿ ಲಭಿಸದ ಹಿನ್ನೆಲೆ ಪಟ್ಟಣದ ಕೆಲವು ಹೊಟೇಲ್ಗಳು ಬಂದ್ ಆಗಿದ್ದರೆ, ಇನ್ನು ಕೆಲವು ಹೊಟೇಲ್ಗಳಲ್ಲಿ ತಿಂಡಿ, ಊಟವನ್ನು ಸ್ಥಗಿತಗೊಳಿಸಿ, ಐಸ್ಕ್ರೀಂ, ಜ್ಯೂಸ್ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಮನೆ ಬಳಕೆಯ ಸಿಲಿಂಡರ್ಗಳೂ ಸಹ ಸಕಾಲದಲ್ಲಿ ಲಭಿಸದ ಹಿನ್ನೆಲೆ ಜನಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬುಕ್ಕಿಂಗ್ಗೆ ತಕ್ಕಂತೆ ಸಿಲಿಂಡರ್ಗಳು ಲಭಿಸುತ್ತಿಲ್ಲ ಎನ್ನಲಾಗಿದೆ. ಬುಕ್ಕಿಂಗ್ ಮಾಡಿ ಖಾಲಿ ಸಿಲಿಂಡರ್ಗಳನ್ನು ಏಜೆನ್ಸಿಯ ಮುಂದೆ ತಂದು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಸಿಲಿಂಡರ್ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಹಲವಷ್ಟು ಮಂದಿಯ ಮೊಬೈಲ್ಗಳಿಂದ ಸಿಲಿಂಡರ್ ಬುಕ್ ಆಗುತ್ತಿಲ್ಲ. ಬುಕ್ಕಿಂಗ್ ಆದರೂ ಸಹ ಓಟಿಪಿ ಬರುತ್ತಿಲ್ಲ. ಓಟಿಪಿ ಬರದಿದ್ದರೆ ಏಜೆನ್ಸಿಯಿಂದ ಸಿಲಿಂಡರ್ ನೀಡುತ್ತಿಲ್ಲ. ಹೀಗಾಗಿ ಸಮಸ್ಯೆ ಬಿಗಡಾಯಿಸುತ್ತಿದೆ.
ಬೇಡಿಕೆಗೆ ತಕ್ಕಂತೆ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಗ್ರಾಹಕರು ಸಮಸ್ಯೆಗೆ ಸಿಲುಕಿದ್ದಾರೆ. ಬುಕ್ಕಿಂಗ್ ಆದ ೧೦ ದಿನಗಳ ನಂತರ ಸಿಲಿಂಡರ್ ಪಡೆದುಕೊಳ್ಳಬೇಕಾದ ಸ್ಥಿತಿಯೂ ನಿರ್ಮಾಣವಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನೇ ನಂಬಿಕೊAಡಿದ್ದ ಹೊಟೇಲ್, ಕ್ಯಾಂಟೀನ್ಗಳು ಬಹುತೇಕ ಮುಚ್ಚುವ ಹಂತದಲ್ಲಿದೆ. ಸೌದೆ ಒಲೆಯನ್ನು ಆಶ್ರಯಿಸಿರುವ ಹೊಟೇಲ್ಗಳಲ್ಲಿ ತಕ್ಕ ಮಟ್ಟಿಗೆ ತಿಂಡಿ-ಊಟ ಲಭಿಸುತ್ತಿದೆ. ಇತ್ತ ಮನೆಗಳಲ್ಲಿಯೂ ಗ್ಯಾಸ್ ಗೀಸರ್ ಸ್ಥಗಿತಗೊಳ್ಳುತ್ತಿವೆ. ಮುಚ್ಚಲ್ಪಟ್ಟಿದ್ದ ಸೌದೆ ಒಲೆಗಳತ್ತ ಮುಖ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಯಥೇಚ್ಛವಾಗಿ ಸೌದೆಗಳು ಲಭಿಸುವುದರಿಂದ ಅಡುಗೆ ಅನಿಲ ಸಿಲಿಂಡರ್ ಅಭಾವ ಅಷ್ಟಾಗಿ ಬಾಧಿಸುತ್ತಿಲ್ಲ.