ಸುಂಟಿಕೊಪ್ಪ, ಮಾ. ೨೯: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಅವಶ್ಯಕವಾಗಿರುವ ಶಿಕ್ಷಣ, ಕರಕುಶಲ ಸೇರಿದಂತೆ ಹತ್ತಾರು ತರಬೇತಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸುವ ಮೂಲಕ ಸಂಸ್ಥೆಯು ಮಹಿಳೆಯರ ಜೀವನಕ್ಕೆ ಭದ್ರಬುನಾದಿಯನ್ನು ಒದಗಿಸುತ್ತಿದೆ ಎಂದು ಸಂಜೀವಿನಿ ಒಕ್ಕೂಟದ ಕೃಷಿ ಸಖಿಯಾದ ಬ್ರಿಜಿಟ್ ಡಿಸೋಜ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾನ್ಬೈಲ್ ತಲಕಾವೇರಿ ಜ್ಞಾನವಿಕಾಸ ಕೇಂದ್ರದ ವತಿಯಿಂದ ಮಹಿಳೆಯರಿಗೆ ಸ್ವಾಲಂಬಿ ಬದುಕಿಗಾಗಿ ೩ ತಿಂಗಳ ಹೊಲಿಗೆ ತರಬೇತಿಯನ್ನು ನೀಡಲಾಗಿದೆ. ತರಬೇತುದಾರರಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದ ಬ್ರಿಜಿಟ್ ಡಿಸೋಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅವಶ್ಯಕತೆ ಇರುವ ಮಾಹಿತಿಗಳನ್ನು ಹಾಗೂ ಸ್ವಾವಲಂಬಿ ಜೀವನವನ್ನು ನಡೆಸಲು ಮಹಿಳೆಯರಿಗೆ ಅಗತ್ಯವಾದ ತರಬೇತಿಗಳ ಸೌಲಭ್ಯವನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸಹಕಾರವಾಗಿದೆ ಮುಂದಿನ ದಿನಗಳಲ್ಲಿಯೂ ಈ ಭಾಗದ ಮಹಿಳೆಯರು ಇನ್ನಿತರ ತರಬೇತಿಗಳಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಮಾಲಿನಿ ಮಾತನಾಡಿ, ಸಂಸ್ಥೆಯ ವತಿಯಿಂದ ಹತ್ತಾರು ಸ್ವಾಲಂಬಿ ಉದ್ಯೋಗ ತರಬೇತಿಗಳನ್ನು ಆಗಿಂದಾಗ್ಗೆ ಪ್ರತಿ ಗ್ರಾಮೀಣ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ತರಬೇತಿಗಳಲ್ಲಿ ತಾವು ಪಡೆದ ತರಬೇತಿಯನ್ನು ಕಠಿಣ ಪರಿಶ್ರಮ ಹಾಗೂ ಶೃದ್ಧೆಯನ್ನು ನೀಡುವ ಮೂಲಕ ನಿರ್ವಹಿಸಿದರೆ ಮಾತ್ರ ಸ್ವಾಲಂಬಿ ಬದುಕು ರೂಪಿಸಿಕೊಳ್ಳಲು ಸಾಧ್ಯವೆಂದು ಮಾಲಿನಿ ಹೇಳಿದರು.
೩ ತಿಂಗಳುಗಳ ಕಾಲ ಶಾಂತಗಿರಿಯ ಶಿಕ್ಷಕಿ ನಂದಿನಿ ೩೦ ಮಂದಿಗೆ ತರಬೇತಿ ನೀಡಿದರು. ಈ ಸಂದರ್ಭ ವೇದಿಕೆಯಲ್ಲಿ ಕಾನ್ಬೈಲ್ ಸೇವಾ ಪ್ರತಿನಿಧಿ ಯಶೋಧ, ಶಾಂತಗಿರಿ ಒಕ್ಕೂಟದ ಸೇವಾ ಪ್ರತಿನಿಧಿ ನಂದಿನಿ, ಕಾನ್ಬೈಲ್ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಖತೀಜ ಇದ್ದರು.