ಸೋಮವಾರಪೇಟೆ, ಮಾ.೩೦: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಪುಷ್ಪಗಿರಿ ಬೆಟ್ಟತಪ್ಪಲಿನಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ನುಗ್ಗಿರುವ ಕಳ್ಳರು, ಬೆಳ್ಳಿ ಸೇರಿದಂತೆ ಇತರ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಶ್ರೀ ಮಲ್ಲಿಕಾರ್ಜುನ ದೇವಾಲಯದೊಳಗೆ ರಾತ್ರಿ ಪ್ರವೇಶಿಸಿರುವ ಕಳ್ಳರು, ದೇವಾಲಯದಲ್ಲಿದ್ದ ಬೆಳ್ಳಿ ನಾಗಾಭರಣ, ಆರತಿ ತಟ್ಟೆ, ಪಂಚಲೋಹದ ಪಾತ್ರೆಗಳೂ ಸೇರಿದಂತೆ ಇತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಬೆಳಿಗ್ಗೆ ಅರ್ಚಕರು ಪೂಜೆಗಾಗಿ ದೇವಾಲಯದ ಬಾಗಿಲನ್ನು ತೆರೆಯಲು ಆಗಮಿಸಿದ ಸಂದರ್ಭ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ದೇವಾಲಯ ಸಮಿತಿಯ ಪ್ರಮುಖರಿಗೆ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.