ಭಾಗಮಂಡಲ, ಮಾ. ೩೦ : ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಪ್ರಭಾಕರ್ ಕೇಕುಣ್ಣಾಯ ಅವರನ್ನು ಗ್ರಾಮಸ್ಥರು ಪ್ರೀತಿಯಿಂದ ಅಭಿನಂದನಾ ಕಾರ್ಯಕ್ರಮದ ಮೂಲಕ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಬಿಜೆಪಿ ಮುಖಂಡ ಕೆ.ಜಿ. ಬೋಪಯ್ಯ ಹೇಳಿದರು.
ಭಾಗಮಂಡಲದ ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರದ ವತಿಯಿಂದ ಭಾಗಮಂಡಲದ ವಿಎಸ್ಎಸ್ಎನ್ ಹೊಸೂರು ಡಿ. ಜೋಯಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶ ಯಾವ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂಬುದರ ಬಗ್ಗೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದೇಶ, ರಾಜ್ಯ, ಜಿಲ್ಲೆ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ತಮ್ಮ ಆಚಾರ, ವಿಚಾರ, ಸಂಸ್ಕೃತಿ ಉಳಿಯಬೇಕು ಎಂಬ ಸದುದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕ ಪ್ರಭಾಕರ್ ಕೇಕುಣ್ಣಾಯ ಮಾತನಾಡಿ, ೩೦ ವರ್ಷಗಳಿಂದ ಶಿಕ್ಷಕ ವೃತ್ತಿಯ ಜೊತೆಗೆ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಜನರ ಊರಿನ ಶ್ರೇಯೋಭಿವೃದ್ಧಿಗಾಗಿ ಧಾರ್ಮಿಕ ಸೇವೆ ನಡೆಸಿರುವುದು ಸಂತಸ ತಂದಿದೆ. ಗ್ರಾಮೀಣ ಭಾಗದ ಜನರ ಪ್ರೀತಿಗೆ ಚಿರಋಣಿಯಾಗಿದ್ದೇನೆ ಎಂದರು.
ಹೊಸೂರು ಸತೀಶ್ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹಲವು ಪ್ರತಿಭೆಗಳಿವೆ. ಅಂತಹ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಮಾಡಬೇಕಿದೆ. ಆ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯ ನಡೆಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಿರುವುದು ಉತ್ತಮ ವಿಚಾರ ಎಂದರು. ಕುದುಪಜೆ ಕುಲದೀಪ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗೇಶ್, ಮಾಜಿ ಅಧ್ಯಕ್ಷ ಕಾಳನ ರವಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ರಾಜೀವ್, ಪ್ರಮುಖರಾದ ರವಿ ಹೆಬ್ಬಾರ್, ಬಿಜೆಪಿ ಶಕ್ತಿ ಕೇಂದ್ರದ ಚಲನ್ ನಿಡ್ಯಮಲೆ, ಸುಭಾಷ್, ಜೀವನ್, ಜಲಜಾ ಉಪಸ್ಥಿತರಿದ್ದರು. ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮದೇ ಆದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆ ಹಾದಿಯಲ್ಲಿ ಸಾಗುತ್ತಿರುವ ಪ್ರಭಾಕರ್ ಕೇಕುಣ್ಣಾಯ ಅವರಿಗೆ ಕನ್ನಡ ಫಿಲಂ ಚೇಂಬರ್ ವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನಿಸಲಾಗಿತ್ತು. ಮೈಸೂರಿನಲ್ಲಿ ಧಾರ್ಮಿಕ ಸೇವಾರ್ಥ ಪ್ರಶಸ್ತಿಯನ್ನು ನೀಡಿ ಇತ್ತೀಚೆಗೆ ಗೌರವಿಸಲಾಗಿತ್ತು.