- ಅನಿಲ್ ಹೆಚ್.ಟಿ.

ಮಡಿಕೇರಿ ಎಂದ ಕೂಡಲೇ ಬಹುತೇಕರಿಗೆ ಮೊದಲು ನೆನಪಾಗುವುದೇ ಇಲ್ಲಿನ ಜನರಲ್ ತಿಮ್ಮಯ್ಯ ಸರ್ಕಲ್ ಅಥವಾ ಜಿ.ಟಿ.ಸರ್ಕಲ್. ಜನರಲ್ ತಿಮ್ಮಯ್ಯ ಸರ್ಕಲ್ ಬಂತೆAದರೆ ಮಡಿಕೇರಿಯನ್ನು ತಲುಪಿದೆವು ಎಂದೇ ಅರ್ಥ. ಮಡಿಕೇರಿ ನಗರದ ಹೃದಯ ಭಾಗ ಅಥವಾ ಮಡಿಕೇರಿ - ಮಂಗಳೂರು ಮೈಸೂರು-ವೀರಾಜಪೇಟೆ ಮಾರ್ಗಗಳಿಗೆ ಜಂಕ್ಷನ್ ನಂತಿರುವ ತಿಮ್ಮಯ್ಯ ವೃತ್ತ ಸಾವಿರಾರು ಪ್ರಯಾಣಿಕರ ಪಾಲಿಗೆ ನಿತ್ಯ ನೋಟ.

ತಿಮ್ಮಯ್ಯ ಪ್ರತಿಮೆ ಬಳಿಯಿಂದಲೇ ಮಡಿಕೇರಿ ನಗರದೊಳಕ್ಕೆ ಪ್ರವೇಶಿಸಿದರೆ ಅದೇನೋ ರೋಮಾಂಚನ.. ವೀರಸೇನಾನಿಯ ಪ್ರತಿಮೆ ಗಮನಿಸಿಕೊಂಡು ಮಡಿಕೇರಿ ಸೇರಿದ್ದೇವೆ ಎಂಬ ಸುರಕ್ಷತೆಯ ಭಾವನೆಯೊಂದಿಗೆ ನಗರದೊಳಕ್ಕೆ ಸ್ಥಳೀಯರು ಪ್ರವೇಶಿಸುತ್ತಿದ್ದಾರೆ. ನಿಜವಾದ ಅxðದಲ್ಲಿಯೂ ಜನರಲ್ ತಿಮ್ಮಯ್ಯ ಪ್ರತಿಮೆ ಜನರ ಪಾಲಿಗೆ ಧೈರ್ಯದ ಪ್ರತೀಕ. ಮಡಿಕೇರಿಯೊಳಗೇ ಸುರಕ್ಷಿತವಾಗಿದ್ದೇವೆ ಎಂಬುದರ ಸೂಚಕವಾಗಿ ತಲೆ ಎತ್ತಿ ನಿಂತAತಿದೆ ತಿಮ್ಮಯ್ಯ ಪ್ರತಿಮೆ.

ಸೇನಾ ಧಿರಿಸಿನಲ್ಲಿ ಶಿಸ್ತುಬದ್ದ ಅಧಿಕಾರಿಯಾಗಿ ನಿಂತಿರುವ ತಿಮ್ಮಯ್ಯ ಅವರ ಪ್ರತಿಮೆ ನಿಜಕ್ಕೂ ಕಣ್ಮನ ಸೆಳೆಯುತ್ತಿದೆ.

ಪ್ರತಿಮೆ ಸ್ಥಾಪನೆಯ ಹಿಂದಿನ ಕಥೆ

ಹಿರಿಯ ರಾಜಕಾರಣಿ ಎಂ.ಸಿ.ನಾಣಯ್ಯ ಅವರು ಮಡಿಕೇರಿ ಪುರಸಭೆಯ ಅಧ್ಯಕ್ಷರಾಗಿದ್ದಾಗ ಕಂಡ ಕನಸೇ ತಿಮ್ಮಯ್ಯ ಪ್ರತಿಮೆ ಸ್ಥಾಪನೆಯದ್ದಾಗಿತ್ತು. ಮಿಲಿಟರಿಯಲ್ಲಿ ಜನರಲ್ ಆಗಿದ್ದ ತಿಮ್ಮಯ್ಯ ಅವರ ಪ್ರತಿಮೆ ಮಡಿಕೇರಿಯಲ್ಲಿರಲೇಬೇಕು ಎಂದು ನಾಣಯ್ಯ ಚಿಂತಿಸಿದ್ದರು . ಭಾರತದ ಯುವಜನತೆ ಮತ್ತು ಸೇನಾಪಡೆಯ ಅಧಿಕಾರಿಗಳು, ಸೈನಿಕರ ಪ್ರೀತಿಗೆ ಪಾತ್ರರಾಗಿದ್ದ ತಿಮ್ಮಯ್ಯ ಪ್ರತಿಮೆ ಅವಶ್ಯಕ ಎಂದು ನಾಣಯ್ಯ ಛಲ ತೊಟ್ಟಿದ್ದರು.

ಪುರಸಭೆಯ ಸದಸ್ಯರ ಅಂಗೀಕಾರ ಪಡೆದು ಪ್ರತಿಮೆ ಸ್ಥಾಪನೆಗೆ ಎಂ.ಸಿ.ನಾಣಯ್ಯ ಮುಂದಾದರು. ಪ್ರತಿಮೆ ಸ್ಥಾಪನೆಗೆ ಆರ್ಥಿಕ ನೆರವು ನೀಡುವವರೇ ಇಲ್ಲದೆ ಹತಾಶರಾದ ಸಂದರ್ಭ ಅಂದಿನ ರಾಜ್ಯಪಾಲ ಧರ್ಮವೀರ ೧೦ ಸಾವಿರ ರೂ. ನೀಡಿದ್ದರಂತೆ. ಸೇನಾ ಸಮವಸ್ತçದಲ್ಲಿ ತಿಮ್ಮಯ್ಯ ನಿಂತಿರುವ ಭಂಗಿಯ ಚಿತ್ರಕ್ಕಾಗಿ ಯು.ಎನ್.ಓ. ಸಂಸ್ಥೆಗೆ ಪತ್ರ ಬರೆದು ನಾಣಯ್ಯ ಕೋರಿದ ಸಂದರ್ಭ ಅವರ ಯೋಜನೆ ಮೆಚ್ಚಿ ಯು.ಎನ್.ಓ.ದಿಂದ ತಿಮ್ಮಯ್ಯ ಅವರ ಸೇನಾ ಸಮವಸ್ತçದಲ್ಲಿರುವ ಅನೇಕ ಚಿತ್ರಗಳು ಲಭಿಸುವಂತಾದವು.

ಮುAಬೈನ ಖ್ಯಾತ ಶಿಲ್ಪಿ ವಾಗ್ ಅವರನ್ನು ಸಂಪರ್ಕಿಸಿ ಪ್ರತಿಮೆ ನಿರ್ಮಿಸಿಕೊಡುವಂತೆ ನಾಣಯ್ಯ ಕೋರಿದಾಗ, ಜನರಲ್ ತಿಮ್ಮಯ್ಯ ಬಗ್ಗೆ ಸದಭಿಪ್ರಾಯ ಹೊಂದಿದ್ದ ವಾಗ್ ೫೦ ಸಾವಿರ ರೂ. ಸಂಭಾವನೆಯಲ್ಲಿ ರೂ. ೨೦ ಸಾವಿರ ಕಡಿಮೆ ಮಾಡಿ ೩೦ ಸಾವಿರ ರೂ.ಗೆ ಹಿತ್ತಾಳೆ ಲೋಹದ ಪ್ರತಿಮೆ ನಿರ್ಮಿಸಿದರು.

ಮುಂಬೈನಲ್ಲಿದ್ದ ಕೋದಂಡ ಕುಟುಂಬದ ಮಹಿಳೆಯರೀರ್ವರು ಪ್ರತಿಮೆ ನಿರ್ಮಾಣದ ಸಂದರ್ಭ ಉಸ್ತುವಾರಿ ವಹಿಸಿಕೊಂಡರು. ಇದಾದ ೬ ತಿಂಗಳಿನಲ್ಲಿಯೇ ಕಂಚಿನ ಪ್ರತಿಮೆ ನಿರ್ಮಾಣಗೊಂಡಿತ್ತು. ರಾಜ್ಯದ ಕೈಗಾರಿಕಾ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಹಿರಿಯ ಸೇನಾಧಿಕಾರಿ ಮಾಣಿಕ್ ಷಾ ಅವರನ್ನು ಪ್ರತಿಮೆ ಅನಾವರಣಕ್ಕೆ ಬರುವಂತೆ ನಾಣಯ್ಯ. ಮನವಿ ಮಾಡಿದ್ದರು. ೧೯೭೩ ರ ಮಾರ್ಚ್ ೨೦ ರಂದು ಮಡಿಕೇರಿಯ ಹೃದಯಭಾಗದಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆ ಅನಾವರಣಗೊಂಡಿತ್ತು. ತಿಮ್ಮಯ್ಯ ಪ್ರತಿಮೆ ಸ್ಥಾಪನೆಯಾಗಿ ೫೩ ವರ್ಷಗಳಾಗಿದೆ.

ರಾಜ್ಯ ಸರ್ಕಾರದ ಅತಿಥಿಯಾಗಿ ಮಡಿಕೇರಿಗೆ ತಿಮ್ಮಯ್ಯ ಪ್ರತಿಮೆ ಅನಾವರಣಕ್ಕೆ ಪತ್ನಿಯೊಂದಿಗೆ ಮಾಣಿಕ್ ಷಾ ಬಂದಿದ್ದರು. ಕಾರ್ಯಕ್ರಮದಲ್ಲಿ ಹೆಸರು ಹಾಕಲಿಲ್ಲ ಎಂಬ ಕಾರಣದಿಂದ ಅಂದಿನ ಮೂವರು ಶಾಸಕರೂ ಕಾರ್ಯಕ್ರಮಕ್ಕೆ ಗೈರಾಗಿದ್ದರು ಎಂದು ನಾಣಯ್ಯ ಸ್ಮರಿಸಿಕೊಳ್ಳುತ್ತಾರೆ.

ಎರಡು ದಿನಗಳ ಕಾಲ ಮಡಿಕೇರಿಯಲ್ಲಿ ಇದ್ದ ಮಾಣಿಕ್ ಷಾ - ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ರೋಶನಾರ ಮನೆಗೂ ಭೇಟಿ ನೀಡಿದ್ದರಂತೆ. ಪ್ರತಿಮೆ ಅನಾವರಣದ ನಂತರದ ದಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೂಡ ತಿಮ್ಮಯ್ಯ ಪ್ರತಿಮೆಗೆ ಪುಪ್ಪಾರ್ಚನೆ ಮಾಡಿ ನಮನ ಸಲ್ಲಿಸಿದ್ದರು. ತಿಮ್ಮಯ್ಯ ಸರ್ಕಲ್ ಅಥವಾ ಜಿ.ಟಿ. ಸರ್ಕಲ್ ಎಂದೇ ಕರೆಯಲ್ಪಡುವ ಈ ವೃತ್ತದಲ್ಲಿದ್ದ ತಿಮ್ಮಯ್ಯ ಪ್ರತಿಮೆ ಅಡಿಯಲ್ಲಿ ಅಂದು ಪ್ರತಿಮೆ ನಿರ್ಮಾಣಕ್ಕೆ ಕಾರಣರಾದ ಎಂ.ಸಿ.ನಾಣಯ್ಯ ಅವರು ಹೆಸರು ಇಲ್ಲವೇ ಇಲ್ಲ!. ಎರಡು ವರ್ಷಗಳ ಕಾಲ ತಿಮ್ಮಯ್ಯ ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ್ದ ಎಂ.ಸಿ.ನಾಣಯ್ಯ ತಮ್ಮ ಹೆಸರನ್ನು ಪ್ರತಿಮೆ ಸ್ಥಳದಲ್ಲಿ ದಾಖಲೆಯಾಗಿ ಹಾಕಿಕೊಳ್ಳಲು ಇಚ್ಚಿಸಲೇ ಇಲ್ಲ ಜನರಲ್ ತಿಮ್ಮಯ್ಯ ಹೆಸರು ಇರುವುದು ಮುಖ್ಯವೇ ಹೊರತು ನನ್ನ ಹೆಸರಲ್ಲ ಎಂದು ಅವರು ಭಾವಿಸಿದ್ದರು.

ಸುವರ್ಣೋತ್ಸವ ಮರೆತರು!

೫೩ ವರ್ಷಗಳ ಹಿಂದೆ ಮಡಿಕೇರಿಯಲ್ಲಿ ತಲೆ ಎತ್ತಿನಿಂತ ಜನರಲ್ ತಿಮ್ಮಯ್ಯ ಪ್ರತಿಮೆ ಇಂದಿಗೂ ಮಡಿಕೇರಿಯ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿಮೆಗೆ ನಗರಸಭೆಯಿಂದ ದೀಪಾಲಂಕಾರ ಮಾಡಲಾಗಿದ್ದು ರಾತ್ರಿಯಲ್ಲಿಯೂ ತಿಮ್ಮಯ್ಯ ಪ್ರತಿಮೆ ಶೋಭಾಯಮಾನವಾಗಿ ಕಂಗೊಳಿಸುತ್ತಿದೆ.

ವಿಪರ್ಯಾಸ ನೋಡಿ. ಭಾರತದ ಹೆಮ್ಮೆಯ, ಧೀಮಂತ ಸೇನಾನಾಯಕರಾಗಿದ್ದ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನಿರ್ಮಾಣವಾದ ೫೦ ನೇ ವರ್ಷವನ್ನು ಮಡಿಕೇರಿ ಮಾತ್ರವಲ್ಲ ಕೊಡಗಿನ ಜನತೆ ಸಂಭ್ರಮದಿAದ ಆಚರಿಸಬೇಕಾಗಿತ್ತು. ತಿಮ್ಮಯ್ಯ ಅವರ ಸೇನಾ ಸಾಧನೆ, ಪ್ರತಿಮೆ ಸ್ಥಾಪನೆಯ ಹಿಂದಿನ ಘಟನೆಯನ್ನೂ ಸ್ಮರಿಸಿಕೊಳ್ಳಬೇಕಾಗಿತ್ತು. ಆದರೆ ಮಡಿಕೇರಿ ನಗರಸಭೆ ಸೇರಿದಂತೆ ಬಹುತೇಕರು ತಿಮ್ಮಯ್ಯ ಪ್ರತಿಮೆಯ ಸ್ಥಾಪನೆಯ ಸುವರ್ಣ ಸಂಭ್ರಮವನ್ನು ಮರೆತೇಬಿಟ್ಟರು.

ಇದಕ್ಕೂ ಕಾರಣವಿದೆ. ತಿಮ್ಮಯ್ಯ ಪ್ರತಿಮೆ ಸ್ಥಾಪನೆಯಾಗಿ ೫೦ ವರ್ಷಗಳಾದ ಸಂದರ್ಭವೇ. ೨೦೨೩ ರ ಆಗಸ್ಟ್ ೨೧ ರಂದು ಸೋಮವಾರ ಬೆಳಗ್ಗೆ ೫.೪೫ ಗಂಟೆಗೆ ಸರ್ಕಾರಿ ಬಸ್ ಡಿಪೋದಿಂದ ನಿಲ್ದಾಣಕ್ಕೆ ಹೊರಟಿದ್ದ ಸರ್ಕಾರಿ ಬಸ್, ಎದುರುಭಾಗದಿಂದ ಬಂದಿದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು, ತಿಮ್ಮಯ್ಯ ಪ್ರತಿಮೆಗೆ ಡಿಕ್ಕಿಹೊಡೆÀದು ಪ್ರತಿಮೆಗೆ ಗಂಭೀರ ಸ್ವರೂಪದ ಹಾನಿಯುಂಟು ಮಾಡಿತ್ತು

ತಿಮ್ಮಯ್ಯ ಪ್ರತಿಮೆಯ ಹಿಂಬದಿ ಐದಾರು ತೂತುಗಳಾಯಿತು. ಕಾಲಿನ ಭಾಗ ಕೊಂಚ ಜಖಂ ಆಯಿತು. ಆವರಣ ಬೇಲಿ ಹಾನಿಗೊಳಗಾಯಿತು. ಪ್ರತಿಮೆ ನಿಂತಿದ್ದ ಸ್ತಂಭ ಕೂಡ ಹಾನಿಗೊಳಗಾಯಿತು. ತರುವಾಯ ಮೈಸೂರಿಗೆ ಪ್ರತಿಮೆಯನ್ನು ಕೊಂಡೊಯ್ಯಲಾಯಿತು. ಮೈಸೂರಿನಲ್ಲಿರುವ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ (ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಬಾಲಶ್ರೀರಾಮನನ್ನು ಕೆತ್ತಿದ ಹೆಸರಾಂತ ಶಿಲ್ಪಿ) ತಿಮ್ಮಯ್ಯ ಪ್ರತಿಮೆಯ ದುರಸ್ತಿ ಕಾರ್ಯವನ್ನು ತನ್ನ ಬಳಗದೊಂದಿಗೆ ಅತ್ಯಂತ ಮುತುವರ್ಜಿಯಿಂದ ಮಾಡಿದರು. ನಾನಾ ಕಾರಣಗಳಿಂದಾಗಿ ಜನರಲ್ ತಿಮ್ಮಯ್ಯ ಪ್ರತಿಮೆ ಮತ್ತೆ ಮಡಿಕೇರಿಯಲ್ಲಿ ಮರು ಸ್ಥಾಪನೆಯಾಗಲು ವಿಳಂಬವಾಗುತ್ತಲೇ ಹೋಯಿತು.

ಅದೆಷ್ಟೋ ಸಂಭ್ರಮಾಚರಣೆಗಳು. ಅದೆಷ್ಟೋ ಪ್ರತಿಭಟನೆಗಳು.. ಅದೆಷ್ಟೋ ವಿಜಯೋತ್ಸವಗಳು.. ತಿಮ್ಮಯ್ಯ ಪ್ರತಿಮೆ ಇಲ್ಲದ ವೃತ್ತದಲ್ಲಿ ನಡೆದವು. ಆದರೆ ಯಾವುದೂ ಕೂಡ ಪ್ರತಿಮೆ ಇದ್ದಾಗಿನ ಉತ್ಸಾಹದಿಂದ ನಡೆಯಲಿಲ್ಲ ಎಂಬುದು ವಾಸ್ತವ. ಪ್ರತಿಭಟನೆಗಳು ಕೂಡ ಖಾಲಿ ಇದ್ದ ಜಾಗದ ಎದುರು ನೀರಸವಾಗಿಯೇ ನಡೆದು ಹೋದವು. ಧಿಕ್ಕಾರ ಅಥವಾ ಜೈಘೋಷ ಕೂಗಲೂ ಹಿಂದೆ ಓರ್ವ ಧೀಮಂತನಿರಬೇಕು ಎಂಬ ಮಾತಿಗೆ ಸಾಕ್ಷಿ ಎಂಬAತೆ ಜನರು, ಪ್ರತಿಮೆ ಇಲ್ಲದ ಸರ್ಕಲ್ ನಲ್ಲಿ ಏನೇ ಮಾಡಲೂ ಉತ್ಸಾಹವನ್ನೇ ಕಳೆದುಕೊಂಡಿದ್ದರು ಎಂಬುದು ಕಟು ಸತ್ಯ.! ಇಂತಿರುವಾಗ.. ಮಡಿಕೇರಿ ಕೊಡವ ಸಮಾಜ, ಮಡಿಕೇರಿ ನಗರಸಭೆ, ಜನರಲ್ ಕಾರ್ಯಪ್ಪ, ತಿಮ್ಮಯ್ಯ ಫೋರಂ ಸೇರಿದಂತೆ ಕೆಲವು ಸಂಘ ಸಂಸ್ಥೆಗಳು ತಿಮ್ಮಯ್ಯ ಪ್ರತಿಮೆ ಮರುಸ್ಥಾಪನೆಗೆ ಸಾಕಷ್ಟು ಮುತುವರ್ಜಿ ವಹಿಸಿದವು.

ಎಲ್ಲಕ್ಕಿಂತ ಮುಖ್ಯವಾಗಿ ಹಿರಿಯ ಮುತ್ಸದ್ದಿ ಎಂ.ಸಿ.ನಾಣಯ್ಯ ಮಡಿಕೇರಿಯಲ್ಲಿ ತಿಮ್ಮಯ್ಯ ಪ್ರತಿಮೆ ಸ್ಥಾಪನೆ ಬಗ್ಗೆ ಸಾಕಷ್ಟು ಆಸಕ್ತಿ ತೋರಿದ್ದರು. ಸರಿಸುಮಾರು ೧೮೦ ದಿನಗಳ ಬಳಿಕ ಜನರಲ್ ತಿಮ್ಮಯ್ಯ ಪ್ರತಿಮೆ ಮಡಿಕೇರಿಗೆ ಬಂದು ಮರುಸ್ಥಾಪನೆಯಾಯತು. ಮಡಿಕೇರಿಯ ಹೃದಯ ಭಾಗದಲ್ಲಿ ತಿಮ್ಮಯ್ಯ ಪ್ರತಿಮೆ ೨೦೨೪ ರ ಮಾರ್ಚ್ ೮ ರ ಮಹಿಳಾ ದಿನಾಚರಣೆಯ ಮಹತ್ವದ ದಿನದಿಂದ ಕಂಗೊಳಿಸಿತು.

೧೮೦ ದಿನಗಳು ಬಿಕೋ ಎನ್ನುತ್ತಿದ್ದ ಸರ್ಕಲ್ ಮತ್ತೆ ಅತ್ಯಾಕರ್ಷಕ ರೀತಿಯಲ್ಲಿ ತಿಮ್ಮಯ್ಯ ಪ್ರತಿಮೆಯಿಂದ ಸೌಂದರ್ಯ ಪಡೆದುಕೊಂಡಿತ್ತು. ಇತ್ತೀಚಿಗೆ ಪೊಲೀಸ್ ಇಲಾಖೆ ಜ. ತಿಮ್ಮಯ್ಯ ಪ್ರತಿಮೆ ಬಳಿ ಪ್ರತಿಭಟನೆ-ಮೆರವಣಿಗೆ ನಡೆಸಬಾರದು ಎಂದು ನಿರ್ಧಾರ ಕೈಗೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.