ಪಾಲಿಬೆಟ್ಟ, ಮಾ. ೩೧: ಸಿದ್ದಾಪುರ ಪೊಲೀಸ್ ಠಾಣೆ, ವೀರಾಜಪೇಟೆ ಕಾರ್ಯನಿರತ ಪತ್ರಕರ್ತರ ಸಂಘ, ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ - ಪಾಲಿಬೆಟ್ಟ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ, ಪಾಲಿಬೆಟ್ಟದ ವಿನಾಯಕ ಟಿಂಬರ್ಸ್, ಗಣಪತಿ ಸೇವಾ ಮಿತ್ರ ಮಂಡಳಿ, ಪಾಲಿಬೆಟ್ಟ ಕಲ್ಬರಲ್ ಅಸೋಸಿಯೇಷನ್, ಕಾವೇರಿ ತಮಿಳು ಸಂಘ -ಕೊಡಗು ಜಿಲ್ಲೆ, ವರ್ತಕರ ಸಂಘ ಪಾಲಿಬೆಟ್ಟ, ಆಟೋ ಮಾಲಿಕರ ಮತ್ತು ಚಾಲಕರ ಸಂಘ - ಪಾಲಿಬೆಟ್ಟ, ಯಂಗ್ ಇಂಡಿಯಾ ಯೂತ್ ಕ್ಲಬ್ ಪಾಲಿಬೆಟ್ಟ ಇವರ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಪಾಲಿಬೆಟ್ಟದ ಚೆಶೈರ್ ಹೋಮ್ಸ್ ಇಂಡಿಯಾ-ಕೂರ್ಗ್ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಚೆಶೈರ್ ಹೋಮ್ ಶಾಲೆಯ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸುವ ನಾಮಫಲಕಗಳನ್ನು ಪ್ರದರ್ಶಿಸಿ, ವಿವಿಧ ಘೋಷಣೆಗಳನ್ನು ಕೂಗುತ್ತ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಿದರು.

ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೊಲೀಸ್ ಇಲಾಖೆಯ ವತಿಯಿಂದ ನಡೆಸಬೇಕಾದ ಕಾರ್ಯಕ್ರಮವನ್ನು ವ್ಯಾಪ್ತಿಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಸುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಸ್ತೆ ನಿಯಮಗಳು ಪೊಲೀಸ್ ಇಲಾಖೆಯನ್ನು ಮೆಚ್ಚಿಸಲು ಮಾಡುವ ಕಾರ್ಯವಲ್ಲ, ಅದು ಪ್ರತಿಯೊಬ್ಬ ಚಾಲಕನ ಹಾಗೂ ಅವರ ಕುಟುಂಬದ ರಕ್ಷಣೆಗೆ ಪಾಲಿಸುವಂತಾಗಬೇಕೆAದರು.

ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ರಸ್ತೆ ನಿಯಮವನ್ನು ಪಾಲಿಸುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಢಿಸಬೇಕೆಂದು ಕರೆ ನೀಡಿದರು. ಅಲ್ಲದೆ ರಸ್ತೆ ನಿಯಮವನ್ನು ಪಾಲಿಸದಿದ್ದಲ್ಲಿ ಇಲಾಖೆಯಿಂದ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಚೆಶೈರ್ ಹೋಮ್ಸ್ ವಿಶೇಷಚೇತನ ಶಾಲೆಯ ಹಳೆಯ ವಿದ್ಯಾರ್ಥಿ ಧನುಷ್ ಮಾತನಾಡಿ, ರಸ್ತೆ ಸುರಕ್ಷತಾ ನಿಯಮವನ್ನು ಎಲ್ಲರೂ ಪಾಲಿಸಬೇಕು. ಇತ್ತೀಚೆಗೆ ಪೋಷಕರು ತಮ್ಮ ಹದಿಹರೆಯದ ಮಕ್ಕಳಿಗೆ ವಾಹನವನ್ನು ಚಾಲನೆ ಮಾಡಲು ಬಿಟ್ಟು ಸಾಧನೆ ಮಾಡುವಂತೆ ಬೀಗುತ್ತಾರೆ, ಅದು ಕಾನೂನು ಬಾಹಿರವಾಗಿದ್ದು ಹದಿಹರೆಯದವರು ವಾಹನ ಚಾಲನೆ ಮಾಡುವುದು ಅಪರಾಧವಾಗಿದ್ದು ಪೋಷಕರು ಗಮನಹರಿಸಬೇಕೆಂದರು. ಅಲ್ಲದೆ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಮಾಹಿತಿ ನೀಡಿದರು. ಮಡಿಕೇರಿ ವೃತ್ತ ನಿರೀಕ್ಷಕರಾದ ಪಿ.ಕೆ ರಾಜು ಅವರು ಹಲವು ನಿಯಮಗಳನ್ನು ತಿಳಿಸುವುದರೊಂದಿಗೆ ಪ್ರೊಜೆಕ್ಟರ್ ಮೂಲಕ ಸಂಚಾರಿ ನಿಯಮಗಳ ಕುರಿತಾದ ಕಾನೂನು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಸದಸ್ಯ ವಿಜು ಸುಬ್ರಮಣಿ ಮಾತನಾಡಿ, ರಸ್ತೆ ಸಂಚಾರ ನಿಯಮವನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ಸಂಸ್ಥೆಯ ಕಾರ್ಯದರ್ಶಿ ಡಾ. ಎ ಸಿ ಗಣಪತಿ, ವೀರಾಜಪೇಟೆ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಮಾತನಾಡಿದರು.

ಈ ಸಂದÀರ್ಭದಲ್ಲಿ ಚೆಶೈರ್ ಹೋಮ್ ಇಂಡಿಯ ಕೂರ್ಗ್ ಸಂಸ್ಥೆಯ ಅಧ್ಯಕ್ಷೆ ಗೀತಾ ಚಂಗಪ್ಪ, ಗಣಪತಿ ಸೇವಾ ಮಿತ್ರ ಮಂಡಳಿ ಅಧ್ಯಕ್ಷ ಅಜಿತ್ ಕರುಂಬಯ್ಯ, ಕಾವೇರಿ ತಮಿಳು ಸಂಘದ ಜಿಲ್ಲಾಧ್ಯಕ್ಷ ಮೈಕಲ್, ಯಂಗ್ ಇಂಡಿಯ ಯೂತ್ ಕ್ಲಬ್ ಅಧ್ಯಕ್ಷ ಸಲೀಂ ರಹಮಾನ್, ಕಾರ್ಯದರ್ಶಿ ರಶೀದ್, ಆಟೋ ಮಾಲಿಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ದೂಜ ವೇಗಸ್, ವರ್ತಕರ ಸಂಘದ ಖಜಾಂಚಿ ಅಬುಬಕರ್, ಮುಖ್ಯೋಪಾಧ್ಯಾಯರಾದ ಶಿವರಾಜ್ ಸೇರಿದಂತೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.