ಮಡಿಕೇರಿ, ಮಾ. ೩೧: ಮಡಿಕೇರಿ ನಗರ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಆಟೋ ಚಾಲಕ ಹಾಗೂ ಮಾಲೀಕರ ಕ್ರಿಕೆಟ್ ಹಾಗೂ ಆಟೋಟ ಸೇರಿದಂತೆ ಸಾರ್ವಜನಿಕರಿಗೆ ಡ್ಯಾನ್ಸ್ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್. ಮೇದಪ್ಪ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ ೫ ರಿಂದ ಮೂರು ದಿನಗಳ ಕಾಲ ನಗರದ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ಜಿಲ್ಲೆಯ ಸ್ಥಳೀಯ ಆಟೋ ಸಂಘಟನೆಗಳಲ್ಲಿ ಸದಸ್ಯರಾಗಿರುವ ಆಟೋ ಚಾಲಕ ಹಾಗೂ ಮಾಲೀಕರು ತಂಡಗಳಲ್ಲಿ ಆಟಗಾರರಾಗಿ ಭಾಗವಹಿಸಲಿದ್ದಾರೆ. ಈಗಾಗಲೇ ೧೬ ತಂಡಗಳು ಪಂದ್ಯಾಟಕ್ಕೆ ನೋಂದಾಯಿಸಿಕೊAಡಿವೆ. ವಿಜೇತ ತಂಡಕ್ಕೆ ರೂ. ೪೦ ಸಾವಿರ ಹಾಗೂ ರನ್ನರ್ ಅಪ್ ತಂಡಕ್ಕೆ ರೂ. ೨೫ ಸಾವಿರ ನಗದು ಬಹುಮಾನ. ತೃತೀಯ ಹಾಗೂ ಚತುರ್ಥ ಸ್ಥಾನ ಪಡೆಯುವ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ವಿವರಿಸಿದರು.

ಏಪ್ರಿಲ್ ೧೧ ರಂದು ಗಾಂಧಿ ಮೈದಾನದಲ್ಲಿ ಬೆಳಿಗ್ಗೆನಿಂದಲೇ ವಿವಿಧ ಆಟೋಟಗಳು ಸಾರ್ವಜನಿಕರು ಹಾಗೂ ಆಟೋ ಚಾಲಕ, ಮಾಲೀಕರಿಗಾಗಿ ಆಯೋಜಿತವಾಗಿದೆ. ಮಕ್ಕಳಿಗೆ ಕಾಳು ಹೆಕ್ಕುವುದು, ಬಲೂನ್ ಒಡೆಯುವುದು, ಬಕೆಟ್‌ಗೆ ಚೆಂಡು ಹಾಕುವುದು, ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಆಟೋ ಚಾಲಕರ ಕಬಡ್ಡಿ ಪಂದ್ಯಾಟ, ಓಟದ ಸ್ಪರ್ಧೆ, ಮಹಿಳೆಯರಿಗೆ ಹಗ್ಗಜಗ್ಗಾಟ, ಬಾಂಬ್ ಇನ್ ದ ಸಿಟಿ, ಸಂಗೀತ ಕುರ್ಚಿ, ಮಡಿಕೆ ಒಡೆಯುವುದು, ಲೆಮೆನ್ ಆ್ಯಂಡ್ ಸ್ಪೂನ್, ಭಾರದ ಗುಂಡು ಎಸೆತ ಸೇರಿದಂತೆ ಇನ್ನಿತರ ಮನರಂಜನಾ ಕ್ರೀಡಾಕೂಟಗಳು ನಡೆಯಲಿವೆ. ಸಂಜೆ ೬ ಗಂಟೆ ನಂತರ ಡ್ಯಾನ್ಸ್ ಮೇಳ ಆರಂಭವಾಗಲಿದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವವರು ಏ. ೬ರೊಳಗಾಗಿ ೯೬೮೬೩೦೦೭೩೮ ಅಥವಾ ೬೩೬೦೨೫೨೬೮೯ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮಡಿಕೇರಿ ನಗರಾಧ್ಯಕ್ಷ ಎ. ಸಮ್ಮದ್, ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಖಜಾಂಚಿ ಹೆಚ್.ಎಸ್. ನಾಗರಾಜ್, ಪ್ರಧಾನ ಕಾರ್ಯದರ್ಶಿ ಬಾರನ ದಿನೇಶ್, ನಿರ್ದೇಶಕ ಜಸ್ಟಿನ್ ಡಿಸೋಜ ಹಾಜರಿದ್ದರು.