ವೀರಾಜಪೇಟೆ, ಮಾ. ೩೧: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವವು ತಾ. ೨, ೩ ಮತ್ತು ೪ ರಂದು ನಡೆಯಲಿದೆ.
ಕೆದಮುಳ್ಳೂರು ಚಾಮುಂಡಿ ಹಬ್ಬ ಎಂದರೆ ಎಲ್ಲೆಡೆ ಪ್ರಚಲಿತದಲ್ಲಿದ್ದು ಅತ್ಯಂತ ಹೆಸರುವಾಸಿಯಾಗಿದೆ ಹಾಗೂ ಅತ್ಯಂತ ಶಕ್ತಿಯನ್ನು ಹೊಂದಿರತಕ್ಕAತಹ ಚಾಮುಂಡಿ ದೇವಿಯ ಕ್ಷೇತ್ರವಾಗಿದೆ. ಹಾಗಾಗಿ ಈ ಉತ್ಸವದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು, ದೂರ ದೂರದ ಊರುಗಳಿಂದ ಭಕ್ತರು ಆಗಮಿಸಿ ದೇವರಲ್ಲಿ ಹರಕೆ ಹೊತ್ತುಕೊಂಡು ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ.
ತಾ. ೨ ರಂದು ರಾತ್ರಿ ೮.೩೦ ಗಂಟೆಗೆ ಕೊಟ್ಟಿಪಾಡೋ, ತಾ. ೩ ರಂದು ರಾತ್ರಿ ೮:೩೦ ಗಂಟೆಗೆ ತಕ್ಕರ ಮನೆಯಿಂದ ಭಂಡಾರ ಇಳಿಯುವುದು ಹಾಗೂ ರಾತ್ರಿ ವಿವಿಧ ಕೋಲಗಳು ನಡೆಯಲಿವೆ.
ತಾ. ೪ ರಂದು ಬೆಳಿಗ್ಗೆ ೭.೩೦ ಗಂಟೆಗೆ ವಿಷ್ಣುಮೂರ್ತಿ ತೆರೆ, ಮಧ್ಯಾಹ್ನ ೧೨ ಗಂಟೆಗೆ ಶ್ರೀ ಚಾಮುಂಡಿ ತೆರೆ ನಡೆಯಲಿದೆ. ಬೆಳಿಗ್ಗೆ ೪ ರಂದು ಪ್ರಮುಖವಾದ ವಿಷ್ಣುಮೂರ್ತಿ ಕೋಲವು ದೇವಾಲಯದ ಮುಂದೆ ಸಿದ್ಧಪಡಿಸಿದ್ದ ಬೆಂಕಿ ಕೆಂಡದ ಮೇಲೆ ೧೦೧ ಬಾರಿ ಮೇಲೇರಿ ಬೀಳಲಿದೆ. ಬಳಿಕ ಮಧ್ಯಾಹ್ನ ೧೨ ರ ಸುಮಾರಿಗೆ ಇನ್ನೊಂದು ಪ್ರಮುಖವಾದ ಚಾಮುಂಡಿ ದೇವಿಯ ಕೋಲವನ್ನು ಪ್ರಸ್ತುತಪಡಿಸಲಾಗುತ್ತದೆ.
ಈ ಉತ್ಸವದ ಕೊನೆಯ ತೆರೆಯಾದ ಚಾಮುಂಡಿ ದೇವಿ ಕೆಂಪು ವಸ್ತçದಲ್ಲಿ ಕಂಗೋಳಿಸುವ ತೆರೆಯಾಗಿದ್ದು ಆಕರ್ಷಕವಾಗಿರುತ್ತದೆ.
ಈ ತೆರೆಗೆ ಉದ್ದನೆಯ ಬಿದಿರಿನಿಂದ ತಯಾರಿಸಿ ಶೃಂಗಾರಗೊಳಿಸಿದ ಮುಡಿಯನ್ನು ಏರಿಸಲಾಗುತ್ತದೆ. ಇದು ಭಕ್ತರನ್ನು ಆಕರ್ಷಿಸುವುದಲ್ಲದೆ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುತ್ತದೆ.
ಸಂಜೆ ವೇಳೆಗೆ ದೇವರು ಬನಕ್ಕೆ ತೆರಳಿ ಅಲ್ಲಿ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ವಾರ್ಷಿಕ ತೆರೆ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ಈಗಾಗಲೇ ದೇವಾಲಯದ ಕ್ಷೇತ್ರದ ಪದ್ಧತಿಯಂತೆ ಹಬ್ಬದ ಕಟ್ಟು ಬಿದ್ದಿದ್ದು, ಗ್ರಾಮದಲ್ಲಿ ಹಸಿ ಮರಗಳನ್ನು ಕಡಿಯುವಂತಿಲ್ಲ. ಈ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅಪಾರವಾದ ಕ್ಷೇತ್ರ ಮಹಿಮೆಯನ್ನು ಹೊಂದಿದ್ದಲ್ಲದೆ ನಂಬಿದವರ ಕೈ ಬಿಡುವುದಿಲ್ಲ ಎನ್ನುವ ಮಾತಿದೆ. ಭಕ್ತರು ಶ್ರದ್ಧಾಭಕ್ತಿಯಿಂದ ನಂಬಿಕೆಯಿAದ ದೇವಾಲಯದ ಕಟ್ಟುಪಾಡಿನಂತೆ ಚಾಮುಂಡಿ ದೈವಸ್ಥಾನಕ್ಕೆ ಪ್ರವೇಶ ನೀಡಬಹುದಾಗಿದೆ.
ದೇವರನ್ನು ಪರೀಕ್ಷಿಸುವ ನೆಪದಲ್ಲಿ ಅಥವಾ ದೇವರ ಸಂಪ್ರದಾಯ ಮತ್ತು ಕಟ್ಟುಪಾಡುಗಳಿಗೆ ವಿರುದ್ಧವಾಗಿ ನಡೆದಂತಹ ಸಂದರ್ಭದಲ್ಲಿ ದೇವರ ಕೆಂಗಣ್ಣಿಗೆ ಗುರಿಯಾದ ಸನ್ನಿವೇಶಗಳು ಬಹಳಷ್ಟಿವೆ.
ಪ್ರತಿಯೊಬ್ಬರೂ ಶ್ರದ್ಧಾಭಕ್ತಿ ಯಿಂದ ಚಾಮುಂಡಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವತಕ್ಕರಾದ ಮಾಳೇಟಿರ ಗಣೇಶ್ ಕಾರ್ಯಪ್ಪ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.