ಸೋಮವಾರಪೇಟೆ, ಮಾ. ೩೧: ತಾಲೂಕಿನಲ್ಲಿರುವ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿರುವ ಪಟ್ಟಣದÀ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದ ಜಾತ್ರೋತ್ಸವ ಶ್ರದ್ದಾಭಕ್ತಿಯಿಂದ ನಡೆದು ಸಂಪನ್ನಗೊAಡಿತು.

ಕಕ್ಕೆಹೊಳೆ ಸಮೀಪವಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಮುತ್ತಪ್ಪಸ್ವಾಮಿ, ತಿರುವಪ್ಪ, ವಿಷ್ಣುಮೂರ್ತಿ, ಭಗವತಿ, ರಕ್ತಚಾಮುಂಡಿ, ಕಂಡಕರ್ಣ, ಕರಿಂಗುಟ್ಟಿಶಾಸ್ತವು, ಶ್ರೀಪೊಟ್ಟನ್‌ದೇವನ್ ಹಾಗೂ ಗುಳಿಗನ್ ದೈವದ ವೆಳ್ಳಾಟಂ ಹಾಗೂ ವಿವಿಧ ಕೋಲಗಳು ನಡೆದವು. ಬೆಳಗ್ಗಿನ ಜಾವ ದೈವಗಳ ವೇಷ-ಭೂಷಣ, ನರ್ತನಗಳು,ಹಾಗೂ ಮುತ್ತಪ್ಪ ಮತ್ತು ತಿರುವಪ್ಪ ದೇವರುಗಳ ಕೋಲಗಳು ನಡೆದವು.

ಈ ದೇವಸ್ಥಾನದ ಸಮೀಪ ಪೂಜಿಸಲ್ಪಡುತ್ತಿರುವ ಶ್ರೀ ಭುವನೇಶ್ವರಿ ದೇವಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ನಾಗದೇವತೆಗಳು, ಶ್ರೀ ಗಣಪತಿ ಮೂರ್ತಿಗಳಿಗೆ ಅರ್ಚಕರಿಂದ ವಿಶೇಷ ಪೂಜೆಗಳು ನಡೆದವು. ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಕಲಶದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ದೇವಾಲಯದ ಆವರಣದಲ್ಲೂ ಸಿಂಗಾರಿ ಮೇಳದ ಪ್ರದರ್ಶನ ನೋಡುಗರ ಮನ ಸೆಳೆಯಿತು. ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಕೃಷ್ಣಕುಮಾರ್ ಪೌರೋಹಿತ್ಯದಲ್ಲಿ ಗಣಪತಿಹೋಮದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭಗೊAಡಿತು. ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್ ನೇತೃತ್ವದಲ್ಲಿ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡು ಪೂಜಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದರು. ಎರಡು ದಿನಗಳ ಕಾಲ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.