ಕೂಡಿಗೆ, ಏ. ೧: ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಜಲಜೀವನ್ ಮಿಷನ್ ಘಟಕ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಶಾಲೆಯ ಇಕೋ- ಕ್ಲಬ್, ರಾಷ್ಟಿçÃಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ ಎಸ್.ಡಿ.ಎಂ.ಸಿ. ಸಮಿತಿಯ ಆಶ್ರಯದಲ್ಲಿ ವಿಶ್ವ ಜಲದಿನ ಅಂಗವಾಗಿ ಜಲ ಜಾಗೃತಿ ಅಭಿಯಾನ ಏರ್ಪಡಿಸಲಾಗಿತ್ತು.
ವಿಶ್ವ ಜಲ ದಿನ: ೨೦೨೬ ರ ಅಂಗವಾಗಿ "ಉತ್ತಮ ಭವಿಷ್ಯಕ್ಕಾಗಿ ನೀರಿನ ಸಂರಕ್ಷಣೆ" ಎಂಬ ವಿಷಯದ ಕುರಿತು ಮಾಹಿತಿ ನೀಡಿದ ಶಾಲೆಯ ಮುಖ್ಯೋಪಾಧ್ಯಾಯ, ಪರಿಸರ ಕಾರ್ಯಕ್ರಮಗಳ ಸಂಘಟಕ ಟಿ.ಜಿ. ಪ್ರೇಮಕುಮಾರ್, ನೀರು ಜೀವಜಲ. ಅಮೂಲ್ಯ ನೈಸರ್ಗಿಕ ಸಂಪನ್ಮೂಲವಾದ ನೀರಿನ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನೀರಿನ ಮಹತ್ವ ತಿಳಿಸಬೇಕು ಎಂದರು.
ಲಭ್ಯವಿರುವ ಜಲ ಸಂಪನ್ಮೂಲಗಳನ್ನು ಅತೀ ಜಾಗರೂಕತೆಯಿಂದ ಮತ್ತು ಮಿತವ್ಯಯದಿಂದ ಬಳಸಿ ಮುಂದಿನ ಪೀಳಿಗೆಗಾಗಿ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರೇಮಕುಮಾರ್ ಹೇಳಿದರು.
ಜಲಜೀವನ್ ಮಿಷನ್ನ ಕಾರ್ಯಕ್ರಮ ಸಂಯೋಜಕ ಹೆಚ್.ಕೆ. ಜಗ್ಗೇಶ್, ಜಲ ಸಂರಕ್ಷಣೆ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಹಲವಾರು ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ನೀರಿನ ಸಂರಕ್ಷಣೆಗೆ ಎಲ್ಲರೂ ಸಂಘಟಿತ ಪ್ರಯತ್ನ ನಡೆಸಬೇಕಿದೆ ಎಂದರು.
ನೀರಿನ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದ ಶಾಲೆಯ ಇಕೋ ಕ್ಲಬ್ನ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯ, ನೀರಿನ ಮರುಬಳಕೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನೀರಿನ ಪ್ರಮುಖ ಸಂರಕ್ಷಣಾ ಕ್ರಮಗಳಾಗಿವೆ ಎಂದು ತಿಳಿಸಿದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್, ಗೈಡ್ಸ್ ಶಿಕ್ಷಕಿ ಕೆ.ಟಿ. ಸೌಮ್ಯ, ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಬಿ.ಎನ್. ಸುಜಾತ, ಅನ್ಸಿಲಾ ರೇಖಾ, ಎಸ್.ಎಂ. ಗೀತಾ ಸಿಬ್ಬಂದಿ ಎಂ. ಉಷಾ ಹಾಗೂ ವಿದ್ಯಾರ್ಥಿಗಳು ಇದ್ದರು.