(ಹೆಚ್.ಕೆ ಜಗದೀಶ್)
ಗೋಣಿಕೊಪ್ಪಲು.ಏ. ೧: ದ.ಕೊಡಗಿನ ಅರುವತ್ತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಕಾಡ್ಲಯ್ಯಪ್ಪ ದೇವಸ್ಥಾನದ ಅನತಿ ದೂರದಲ್ಲಿ ಮನೆಯಪಂಡ ಕುಟುಂಬಸ್ಥರ ಜಾಗದಲ್ಲಿ ಶಕ್ತಿ ದೇವತೆ, ಅನ್ನ ನೀಡುವ ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯವು ಅತ್ಯಂತ ಭರದಿಂದ ಸಾಗುತ್ತಿದೆ.
ಸುಂದರ ಪರಿಸರದ ನಡುವೆ ಎತ್ತರದ ಪ್ರದೇಶದಲ್ಲಿ ಈ ದೇವಸ್ಥಾನ ನಿರ್ಮಾಣವಾಗುತ್ತಿದೆ. ಶ್ರೀ ದೇವಿಯನ್ನು ಸ್ಥಳೀಯರು ‘ಪುಳ್ಳೆ ಭಗವತಿ’ ಅಥವಾ ‘ಬೋಜಮ್ಮೆ’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಅರುವತ್ತೋಕ್ಲು ಗ್ರಾಮದ ದೇವಿಯು ಸೌಮ್ಯ ರೂಪದಲ್ಲಿರುವ ಆದಿಶಕ್ತಿ ಮತ್ತು ಶ್ರೀ ಬೋಜಮ್ಮೆ ಅನ್ನ ಪೂರ್ಣೇಶ್ವರಿ ಎಂದೂ ಪೂಜಿಸಲ್ಪಡುತ್ತಾಳೆ.
ಕೊಡವ ಭಾಷೆಯಲ್ಲಿ ಬೋಜಮ್ಮೆ ಅಥವಾ ಕನ್ನಡದಲ್ಲಿ ಅನ್ನಪೂರ್ಣೇಶ್ವರಿ ಎಂದರೆ ಆಹಾರ ಮತ್ತು ಆಹಾರವನ್ನು ಸದಾ ನೀಡುವ ದೇವತೆ. ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ಮಹಾ ಸರಸ್ವತಿ, ಮಹಾ ಕಾಳಿ ಮತ್ತು ಮಹಾಲಕ್ಷಿö್ಮ (ಜ್ಞಾನ, ಶಕ್ತಿ ಮತ್ತು ಸಮೃದ್ಧಿಯ ಅಧಿ ದೇವತೆ)ಯ ದ್ಯೋತಕ.
ಈ ದೇವಾಲಯಕ್ಕೆ ೮೦೦ರಿಂದ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಮೂಲ ದೇವಾಲಯವನ್ನು ಆ ಕಾಲದ ಲ್ಯಾಟ್ರಿಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ದೇವಾಲಯದ ಆವರಣದಲ್ಲಿನ ಅವಶೇಷಗಳು ಇದಕ್ಕೆ ಸಾಕ್ಷಿ. ವಾರ್ಷಿಕ ದೇವಾಲಯ ಉತ್ಸವವು ಒಂದು ತಿಂಗಳ ಕಾಲ ನಡೆಯುತ್ತಿತ್ತು. ದ.ಕೊಡಗಿನ ಭಕ್ತರು ಈ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ದೇವರ ದರ್ಶನ ಪಡೆಯುತ್ತಿದ್ದರು. ದೇವಾಲಯವು ಶತಮಾನಗಳಿಂದ ವೈಭವಿಸುತ್ತಿತ್ತು.
ಕಳೆದ ೩೦೦ ವರ್ಷಗಳ ಹಿಂದೆ ನಾನಾ ಕಾರಣಗಳಿಂದ ದೇವಾಲಯದ ವಾರ್ಷಿಕೋತ್ಸವ ಆಚರಣೆಗಳು ನಿಂತು ಹೋಗಿದ್ದವು. ವಾರ್ಷಿಕ ಆಚರಣೆಯು ಕೇವಲ ಸೌರಮಾನ ಯುಗಾದಿ, ವಿಶು ಹಬ್ಬಕ್ಕೆ ಸೀಮಿತವಾಗಿ ಇಂದಿಗೂ ಇದೇ ರೀತಿ ಮುಂದುವರೆಯುತ್ತಿದೆ.
ಬ್ರಿಟಿಷರ ಆಳ್ವಿಕೆಯಲ್ಲಿ ದೇವಾಲಯದ ಅನೇಕ ಪಾಲಕರು ತಮ್ಮ ಭವಿಷ್ಯ ಮತ್ತು ಉತ್ತಮ ಜೀವನಕ್ಕಾಗಿ ಗ್ರಾಮದಿಂದ ವಲಸೆ ಹೋಗಿದ್ದರು. ಸ್ಥಳೀಯ ಜನರ ಜನಸಂಖ್ಯೆ ಮತ್ತು ದೇವಾಲಯದ ಸಂಪನ್ಮೂಲಗಳು ಕ್ಷೀಣಿಸಿದವು. ದೇವಾಲಯ ಮತ್ತು ಜನರ ನಡುವಿನ ನಿಕಟ ಸಂಬAಧವು ಕಡಿಮೆಯಾಯಿತು. ಇಂದಿನ ಪೀಳಿಗೆಯವರು ದೇವಾಲಯವನ್ನು ಪುನರ್ ನಿರ್ಮಿಸಲು ಹಾಗೂ ಹಿಂದಿನ ವೈಭವ ಮತ್ತು ಸಮೃದ್ಧಿಯನ್ನು ಪುನರ್ ಸ್ಥಾಪಿಸಲು ಮುಂದಾಗಿದ್ದಾರೆ. ‘ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಸ್ಥಾನ ಯೋಜನೆ’ ಎಂಬ ಯೋಜನೆಯಡಿಯಲ್ಲಿ ದೇವಿಯ ನೆಲೆ, ಸ್ಥಾನವನ್ನು ಅದರ ಗತಕಾಲದ ವೈಭವಕ್ಕೆ ಪುನರ್ ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಪ್ರಸ್ತುತ ರೂ.೩೪ ಲಕ್ಷ ವೆಚ್ಚದಲ್ಲಿ ಗರ್ಭಗುಡಿಯ ಕೆಲಸವು ನಡೆಯುತ್ತಿದ್ದು ಗರ್ಭಗುಡಿಗೆ ಕೆಂಪು, ಕಪ್ಪು, ಬಿಳಿ ಬಣ್ಣದ ಶಿಲೆಯನ್ನು ಬಳಸಿ ಗರ್ಭಗುಡಿಯನ್ನು ಅತ್ಯಂತ ವಿಶೇಷ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಶಿಲೆಯನ್ನು ಆಂದ್ರ ಪ್ರದೇಶದಿಂದ ತರಿಸಲಾಗಿದೆ. ದೂರದ ಹೊರನಾಡುವಿನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯ ಹೊರತುಪಡಿಸಿದಲ್ಲಿ ಕೊಡಗಿನ ಅರುವತ್ತೋಕ್ಲು ಗ್ರಾಮದಲ್ಲಿ ಅನ್ನಪೂರ್ಣೇಶ್ವರಿಯು ನೆಲೆಸಿದ್ದಾಳೆ. ಮುಂದೆ ಈ ಕ್ಷೇತ್ರವು ಅನ್ನದಾಸೋಹದ ಕೇಂದ್ರವಾಗಿ ಮಾರ್ಪಡಲಿದೆ. ಸುತ್ತಮುತ್ತಲಿನ ಗ್ರಾಮಗಳು ಅಭಿವೃದ್ಧಿ ಆಗಲಿವೆೆ. ಅಲ್ಲದೆ ದೇವಾಲಯವು ಉತ್ತಮ ಅಭಿವೃದ್ಧಿಯೊಂದಿಗೆ ಈ ಕ್ಷೇತ್ರವು ಪವಿತ್ರ ಕ್ಷೇತ್ರವಾಗಿ ಮಾರ್ಪಡಲಿದೆ ಎಂದು ದೇವಾಲಯಕ್ಕೆ ಆಗಮಿಸಿದ ಹೆಸರಾಂತ ತಂತ್ರಿಗಳು ಭವಿಷ್ಯ ನುಡಿದಿದ್ದಾರೆ. ಈ ಕ್ಷೇತ್ರವು ಮನೆಯಪಂಡ ಕುಟುಂಬಸ್ಥರ ಜಾಗದಲ್ಲಿ ನೆಲೆ ನಿಂತಿರುವುದು ಇಲ್ಲಿನ ವಿಶೇಷಗಳಲ್ಲೊಂದಾಗಿದೆ. ಕಾಡ್ಯಮಾಡ ಕುಟುಂಬಸ್ಥರು, ಜಮ್ಮಡ ಕುಟುಂಬಸ್ಥರು ಹಾಗೂ ಕೊಡಗಿನ ಜನತೆ ಈ ಕ್ಷೇತ್ರದ ಅಭಿವೃದ್ಧಿಗಾಗಿ ಕೈ ಜೋಡಿಸುತ್ತಿದ್ದಾರೆ. ವಿಶೇಷವಾದ ಈ ಶಕ್ತಿ ದೇವತೆ ಅನ್ನಪೂರ್ಣೇಶ್ವರಿ ದೇವಾಲಯ ನಿರ್ಮಾಣಕ್ಕೆ ಸಮಸ್ತ ಭಕ್ತವೃಂದ ಕೈ ಜೋಡಿಸಬೇಕಾಗಿದೆ. ಆ ಮೂಲಕ ಈ ಕೇಂದ್ರವನ್ನು ಧಾರ್ಮಿಕ ಕೇಂದ್ರವನ್ನಾಗಿ ರೂಪು ಮಾಡಬೇಕಾಗಿದೆ. ದೇವಾಲಯ ಸಮಿತಿಯ ಉಪಾಧ್ಯಕ್ಷರಾದ ಮನೆಯಪಂಡ ಅಯ್ಯಪ್ಪ, ಮೊ: ೯೮೮೦೮೧೪೯೯೭ ಅವರನ್ನು ಸಂಪರ್ಕಿಸಬಹುದಾಗಿದೆ.