ಸೋಮವಾರಪೇಟೆ, ಏ. ೧: ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಡವರು ಹಾಗೂ ಕೃಷಿ ಮಾಡಿಕೊಂಡಿರುವ ರೈತರಿಗೆ ಸರ್ಕಾರ ತಕ್ಷಣ ಹಕ್ಕುಪತ್ರಗಳನ್ನು ಒದಗಿಸಬೇಕೆಂದು ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದ್ದು, ಈ ಸಂಬAಧಿತ ಮನವಿಯನ್ನು ತಾಲೂಕು ಕಚೇರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ದಿನೇಶ್ ಶೆಟ್ಟಿ ನೇತೃತ್ವದಲ್ಲಿ ತಾಲೂಕು ಕಚೇರಿಗೆ ತೆರಳಿದ ಪದಾಧಿಕಾರಿಗಳು, ಡೆಪ್ಯೂಟಿ ತಹಶೀಲ್ದಾರ್ ಲೋಹಿತ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ದಿನೇಶ್ ಶೆಟ್ಟಿ, ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹಲವು ದಶಕಗಳಿಂದ ಬಡ ರೈತರು ಸರ್ಕಾರಿ ಜಮೀನುಗಳಲ್ಲಿ ಕಾಫಿ,ಅಡಿಕೆ ತೋಟಗಳನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಇವರುಗಳು ಹಲವು ಬಾರಿ ತಾಲೂಕು ಕಚೇರಿಗೆ ಆಕ್ರಮ ಸಕ್ರಮ ಯೋಜನೆಯಡಿ ದಾಖಲೆ ಒದಗಿಸುವಂತೆ ಮನವಿ ಮಾಡಿದ್ದರೂ ಈವರೆಗೆ ದಾಖಲೆಗಳನ್ನು ನೀಡಿಲ್ಲ ಎಂದರು.

ಈ ಕಾರಣದಿಂದಾಗಿ ಈ ಭಾಗದ ಹಲವಾರು ರೈತರು ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದಾರೆ. ಸಹಕಾರ ಸಂಘಗಳಿAದ ಬಡ್ಡಿ ರಹಿತ ಸಾಲ ಸೌಲಭ್ಯ ಸಿಗುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳಿAದಲೂ ಸಬ್ಸಿಡಿ ಸಾಲ ಸೌಲಭ್ಯ ಪಡೆಯಲಾಗುತ್ತಿಲ್ಲ. ಆದ್ದರಿಂದ ಸೂಕ್ತ ವರದಿಗಳನ್ನು ನೀಡಿ, ರೈತರಿಗೆ ತಮ್ಮ ವ್ಯವಸಾಯದ ಜಮೀನಿನ ಸಾಗುವಳಿ ಪತ್ರವನ್ನು ಒದಗಿಸಿ ಕೊಡಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದರೊಂದಿಗೆ ಸರಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಬಡ ಮಂದಿಗೆ ಹಕ್ಕುಪತ್ರ ನೀಡಿಲ್ಲ. ಇದರಿಂದಾಗಿ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದು, ಜಾಗದ ದಾಖಲಾತಿ ಕೊರತೆಯಿಂದ ಅನಿಶ್ಚಿತತೆಯ ಬದುಕು ಸಾಗಿಸುತ್ತಿದ್ದಾರೆ. ಈ ಹಿನ್ನೆಲೆ ಬಡವರು ಸರ್ಕಾರಿ ಜಮೀನಿನಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.

ಈ ಸಂಬAಧಿತ ಮನವಿಯನ್ನು ಡೆಪ್ಯೂಟಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದಿನೇಶ್ ಶೆಟ್ಟಿ, ಸಂಘಟನೆ ವತಿಯಿಂದ ಬಡ ಹಾಗೂ ರೈತರ ಜಮೀನಿಗೆ ದಾಖಲಾತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದರು.

ಈ ಸಂದರ್ಭ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ನಿರ್ಮಲಾ ಸುರೇಶ್, ವಿನ್ಸೆಂಟ್ ಲೋಬೋ, ಕಾರ್ಯದರ್ಶಿ ಸರಳಾ ರಾಮಣ್ಣ, ಗೌರವಾಧ್ಯಕ್ಷ ನಾಗರಾಜ ಹೆಚ್., ಸಂಘಟನಾ ಕಾರ್ಯದರ್ಶಿ ಲಿತೇಶ್ ಮೊಂತೆರೊ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸೋಮೇಶ್, ಕುಶಾಲನಗರ ಅಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ಅನುಸೂಯ ಗಣೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ, ಸಂಚಾಲಕ ಎಂ.ಎಸ್. ಮಣಿಕಂಠ ಸೇರಿದಂತೆ ಇತರರು ಇದ್ದರು.