ಕಣಿವೆ, ಏ. ೧: ಕಳೆದ ವಾರ ಸುರಿದ ಆಲಿಕಲ್ಲು ಮಳೆಯಿಂದಾಗಿ ತೊರೆನೂರು ವಿರಕ್ತ ಮಠದ ಆವರಣದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ ಬೆಳೆದಂತಹ ಸೌತೆ ಮಾದರಿಯ ಕಾಯಿ ಪಲ್ಯೆ ಬಳ್ಳಾರಿ ಕಾಯಿ ಫಸಲು ನಷ್ಟವಾಗಿದೆ. ನೀರಿನೋಪಾದಿಯಲ್ಲಿ ಬೆಳೆಯ ಮೇಲೆ ಸುರಿದ ಆಲಿಕಲ್ಲಿನಿಂದಾಗಿ ಕಟಾವಿಗೆ ಬಂದAತಹ ಫಸಲು ಸಂಪೂರ್ಣ ನಷ್ಟವಾಗಿದೆ. ಆಲಿಕಲ್ಲು ಬಿದ್ದ ಜಾಗದಲ್ಲಿ ಕೊಳೆತ ಮಾದರಿಯಲ್ಲಿ ಹೊಲದಲ್ಲೇ ಲೋಡುಗಟ್ಟಲೆ ಬಳ್ಳಾರಿ ಫಸಲು ಹಾನಿಯಾಗಿದೆ. ಮಳೆ ಬಾರದಿದ್ದಲ್ಲಿ ವಾರದೊಳಗೆ ಕಟಾವು ಮಾಡಿ ಕೇರಳಕ್ಕೆ ಸಾಗಿಸುವ ಚಿಂತನೆ ಇತ್ತು. ಆದರೆ ಆದಾಯ ಇರಲಿ, ಖರ್ಚು ಮಾಡಿದ ಲಕ್ಷಾಂತರ ರೂ ಅಸಲು ಹಣವೇ ಇಲ್ಲ. ರೈತರ ಸ್ಥಿತಿ ಹೀಗಾದರೆ ಯಾವ ಬೆಳೆ ಬೆಳೆಯೋದು..? ಪಡೆದ ಕೃಷಿ ಸಾಲ ಪಾವತಿಸೋದು ಹೇಗೆ..? ಕೃಷಿಯನ್ನೇ ನಂಬಿ ಬದುಕುವ ಹಳ್ಳಿಗಾಡಿನ ಕೃಷಿಕರು ಮಕ್ಕಳನ್ನು ಓದಿಸುವುದಾದರೂ ಹೇಗೆ..? ಎಂದು ಬೆಳೆ ನಷ್ಟಕ್ಕೆ ತುತ್ತಾದ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಅಲವತ್ತುಕೊಂಡರು.
ಕೃಷಿ, ಕಂದಾಯ ಅಧಿಕಾರಿಗಳು ಬೆಳೆ ನಷ್ಟಕ್ಕೆ ತುತ್ತಾದ ಕೃಷಿಕರ ಅಂಗಳಕ್ಕೆ ಖುದ್ದು ತೆರಳಿ ಬೆಳೆ ಪರಿಹಾರ ಒದಗಿಸಲು ಒತ್ತಾಯಿಸಿದರು. ಗ್ರಾಮದ ಮತ್ತೋರ್ವ ಪ್ರಗತಿಪರ ಕೃಷಿ ಮಹಿಳೆ ರೂಪ ಮಹೇಶ್ ಅವರು ಬೆಳೆದಿದ್ದ ಕಲ್ಲಂಗಡಿ ಫಸಲಿನ ಮೇಲೂ ಆಲಿಕಲ್ಲು ಮಳೆ ಸುರಿದು ವ್ಯಾಪಕವಾದ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಕ್ಯಾನೆ, ಕೆಸ, ಸಿಹಿ ಗೆಣಸು ಎಲ್ಲಾ ಫಸಲುಗಳು ಆಲಿ ಕಲ್ಲು ಮಳೆಗೆ ನೆಲ ಕಚ್ಚಿವೆ ಎಂದು ತೊರೆನೂರು ಗ್ರಾಮದ ಟಿ.ಎಲ್ ಮಹೇಶ್, ಟಿ.ಸಿ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.