ಸಿದ್ದಾಪುರ, ಏ. ೧: ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.

ದೇವಾಲಯದಲ್ಲಿ ಗೋಪೂಜೆ, ಗಣಪತಿ ಹವನ, ಕಲಶ ಪೂಜೆ, ಗಂಗಾ ಸ್ನಾನ ನಂತರ ಕಾವೇರಿ ನದಿಯಿಂದ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮಹಾಪೂಜೆ ತೀರ್ಥ ಪ್ರಸಾದ, ಕೊಂಡಪೂಜೆ, ರುದ್ರಪಾರಾಯಣ, ಕೊಂಡಸೇವೆ ಹಾಗೂ ಹರಕೆ ಒಪ್ಪಿಸುವ ಕಾರ್ಯ, ಮಂತ್ರಾಕ್ಷತೆ ನಡೆಯಿತು. ಎರಡು ದಿನಗಳ ಕಾಲ ಭಕ್ತಾದಿಗಳಿಗೆ ಕುಕ್ಕುನೂರು ಕುಟುಂಬಸ್ಥರಿAದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವಾರ್ಷಿಕ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಭಾಗವಹಿಸಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಕ್ಕುನೂರು ಕುಟುಂಬಸ್ಥರು ಪುರಾತನ ಕಾಲದಿಂದಲೂ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾರ್ಷಿಕೋತ್ಸವದ ಪೂಜಾ ಕಾರ್ಯಕ್ರಮದಿಂದಾಗಿ ನಾಡಿನ ಜನತೆಗೆ ಒಳಿತು ಮಾಡಲಿ ಎಂದು ಶುಭ ಹಾರೈಸಿದರು. ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದರು. ಪೂಜಾ ಕಾರ್ಯಕ್ರಮಗಳಿಗೆ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು. ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ದೇವಾಲಯದ ಆಡಳಿತ ಮಂಡಳಿಯ ತಕ್ಕರಾದ ಕುಕ್ಕುನೂರು ದೇವಿಪ್ರಸಾದ್, ಅಧ್ಯಕ್ಷ ಕೆ.ಬಿ. ಪ್ರಸನ್ನ, ಕಾರ್ಯದರ್ಶಿ ಚಿದಾನಂದ, ಪ್ರಮುಖರಾದ ಕೆ.ಡಿ. ನಾಣಯ್ಯ, ಕೆ.ಜಿ. ಈರಪ್ಪ, ಕೆ.ಜಿ. ಮೋಹನ್, ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ್ ಹಾಗೂ ದೇವಾಲಯ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಕೆ.ಜಿ. ಈರಪ್ಪ ಸ್ವಾಗತಿಸಿ, ವಂದಿಸಿದರು.