ಕೂಡಿಗೆ, ಏ. ೧: ಕೂಡಿಗೆಯ ಸೈನಿಕ ಶಾಲೆ ಕೊಡಗು ತನ್ನ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಎಲ್ಲಾ ನಿಲಯಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಸಾಂಸ್ಕೃತಿಕ ಹಬ್ಬದಲ್ಲಿ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮೊದಲನೆಯದಾಗಿ ಸಮೂಹ ಗೀತೆ ಗಾಯನ ಸ್ಪರ್ಧೆಯಾಗಿದ್ದು, ಶೀರ್ಷಿಕೆಯು "ಭವಿಷ್ಯ ನಮ್ಮದು" ಎಂಬುದಾಗಿತ್ತು. ಎರಡನೆಯದಾಗಿ ಕಿರುನಾಟಕ "ಡಿಜಿಟಲ್ ಕನ್ನಡಿ: ತಂತ್ರಜ್ಞಾನ ಮತ್ತು ನೈತಿಕತೆ" ಎಂಬ ವಿಷಯವಾಗಿತ್ತು. ಮೂರನೆಯದಾಗಿ ಜಾನಪದ ನೃತ್ಯ: ಸ್ಥಳೀಯ ಸಂಪ್ರದಾಯಗಳು ಮತ್ತು ಪುರಾಣ ಕಥೆಗಳ ಅನಾವರಣವಾಗಿದ್ದು, ನಾಲ್ಕನೆಯದಾಗಿ ಸಮೂಹ ನೃತ್ಯ: "ಫ್ರೀ-ಸ್ಟೆöÊಲ್ ಸಿನಿಮಾಟಿಕ್" ಶೈಲಿಯಲ್ಲಿ ಎಂಬ ವಿಷಯವಾಗಿತ್ತು.
ಎಲ್ಲಾ ನಿಲಯಗಳ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ, ಅತ್ಯುತ್ತಮ ಪ್ರದರ್ಶನ ನೀಡಿದ ಕಾರ್ಯಪ್ಪ ನಿಲಯವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಇದೇ ಸಂದರ್ಭದಲ್ಲಿ ಶಾಲೆಯ ೧೩ನೇ ಬ್ಯಾಚ್‌ನ ೧೨ನೇ ತರಗತಿಯ ಕೆಡೆಟ್‌ಗಳಿಗೆ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಕೆಡೆಟ್‌ಗಳ ಎಂಟು ವರ್ಷಗಳ ಶಿಸ್ತುಬದ್ಧ ಜೀವನ, ಕಠಿಣ ತರಬೇತಿ ಮತ್ತು ಶೈಕ್ಷಣಿಕ ಸಾಧನೆಗಳನ್ನು ಮೆಲುಕು ಹಾಕಿದರು. ಈ ಅನುಭವಗಳು ಅವರನ್ನು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಮರ್ಥ ವ್ಯಕ್ತಿಗಳನ್ನಾಗಿ ರೂಪಿಸಿವೆ ಎಂದು ಅವರು ತಿಳಿಸಿದರು.
ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ನಿರ್ಗಮಿತ ಕೆಡೆಟ್‌ಗಳಿಗೆ ಶಾಲೆಯ ನೆನಪಿನ ಕಾಣಿಕೆಗಳನ್ನು ವಿತರಿಸಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರಾಮಾಣಿಕತೆ, ಧೈರ್ಯ, ನಿಷ್ಠೆ ಮತ್ತು ನಾಯಕತ್ವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಶಿಸ್ತು ಮತ್ತು ನಡತೆಯ ಮಹತ್ವವನ್ನು ಒತ್ತಿಹೇಳಿದ ಅವರು, ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳಲು ಮತ್ತು ದುರಭ್ಯಾಸಗಳಿಂದ ಅಂತರ ಕಾಯ್ದುಕೊಳ್ಳಲು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಶಾಲೆಯ ವಿದ್ಯಾರ್ಥಿ ನಾಯಕ ಹೃದಯ್ ವಂದನಾರ್ಪಣೆ ಮಾಡಿದರು. ಅವರು ತಮ್ಮ ಎಂಟು ವರ್ಷಗಳ ಶಾಲಾ ಜೀವನದ ನೆನಪುಗಳನ್ನು ಹಂಚಿಕೊಳ್ಳುತ್ತಾ, ತಮ್ಮ ಬೆಳವಣಿಗೆಗೆ ಸಹಕರಿಸಿದ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಸುಬೇದಾರ್ ಮೇಜರ್ ರಾಮ್ ಲಾಲ್, ರೀತಾ ಕುಮಾರಿ, ದಿವ್ಯಾ ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಹಿರಿಯ ಶಿಕ್ಷಕರಾದ ವಿಭಿನ್ ಕುಮಾರ್, ಡಾ. ಸಿ.ಎಸ್. ಅನುಪಮಾ, ವಿದುಷಿ ಏಂಜೆಲ್ ರಶ್ಮಿ ಡಿಸೋಜಾ, ಋತು ಎನ್. ರಾಜ್ ಹಾಗೂ ಶಾಲೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್‌ಸಿಸಿ ಸಿಬ್ಬಂದಿ ಹಾಗೂ ಕೆಡೆಟ್‌ಗಳು ಉಪಸ್ಥಿತರಿದ್ದರು.