ಐಗೂರು, ಏ. ೧: ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸುವ ಉದ್ದೇಶದಿಂದ ಮಡಿಕೇರಿ ಅರಣ್ಯ ವಿಭಾಗ ವತಿಯಿಂದ ಸೋಮವಾರಪೇಟೆ ವಲಯದ ಅರಣ್ಯದಂಚಿನ ಗ್ರಾಮಸ್ಥರೊಂದಿಗೆ ಸಮಾಲೋಚನ ಸಭೆ ನಡೆಯಿತು.

ಸಭೆಯಲ್ಲಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್ ಭಾಗವಹಿಸಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು. ಗ್ರಾಮದ ಅರಣ್ಯ ಸಮಿತಿ ಹಾಗೂ ಆನೆ ಹೋರಾಟ ಸಮಿತಿಯ ಸದಸ್ಯರು ಪಾಲ್ಗೊಂಡು ಕಳೆದ ಮೂರು ವರ್ಷಗಳಿಂದ ಹಾನಿಗೊಳಗಾಗಿರುವ ರೈಲ್ವೆ ಬ್ಯಾರಿಕೇಡ್ ಸರಿಪಡಿಸಿಲ್ಲವೆಂಬ ವಿಷಯವನ್ನು ಪ್ರಸ್ತಾಪಿಸಿದರು. ಗ್ರಾಮದ ದುರ್ಗಾ ರಸ್ತೆಯ ಬಳಿ ಇರುವ ಇಲಾಖೆಯ ಕೆರೆಕಟ್ಟೆ ದುರ್ಬಲಗೊಂಡಿದ್ದು ಮಳೆಗಾಲದಲ್ಲಿ ನೀರು ತುಂಬಿ ಕಟ್ಟೆ ಒಡೆದು ಹೋದರೆ ಆ ಭಾಗದ ರೈತರ ಗದ್ದೆಗಳು ಜಲಾವೃತವಾಗಿ ಬೆಳೆ ನಾಶವಾಗುವ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.

ಗ್ರಾಮಸ್ಥರ ಮನವಿಗ ಸ್ಪಂದಿಸಿದ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್, ಮುರಿದುಹೋದ ರೈಲ್ವೆ ಬ್ಯಾರಿಕೇಡ್ ಶೀಘ್ರದಲ್ಲಿ ದುರಸ್ತಿಗೊಳಿಸಲಾಗುವುದು, ಜೊತೆಗೆ ಕೆರೆಕಟ್ಟೆಯನ್ನು ಬಲಪಡಿಸುವುದರ ಜೊತೆಗೆ ಆನೆಗಳು ಹೆಚ್ಚಾಗಿ ಸಂಚರಿಸುವ ಪ್ರದೇಶದಲ್ಲಿ ಸಿ.ಸಿ. ಕ್ಯಾಮೆರಾ ಮತ್ತು ಸೋಲಾರ್ ಲ್ಯಾಂಪ್ ಅಳವಡಿಸಲಾಗುವುದು ಎಂದರು. ಅರಣ್ಯ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು ಕಾಡ್ಗಿಚ್ಚು ಹರಡಿ ಹೆಚ್ಚು ಹಾನಿ ಸಂಭವಿಸದAತೆ ಗ್ರಾಮಸ್ಥರು ಇಲಾಖೆಯೊಂದಿಗೆ ಕೈಜೋಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅರಣ್ಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಗೋವಿಂದರಾಜು, ಸುನಂದ ಕುಮಾರ್, ಆನೆ ಹೋರಾಟ ಸಮಿತಿಯ ಮಚ್ಚಂಡ ಅಶೋಕ್, ಬಾರನ ಪ್ರಮೋದ್, ಕೆ.ಪಿ ರಾಯ್, ಧೀರಜ್, ಸಂದೇಶ್, ಅರಣ್ಯ ಇಲಾಖೆಯ ನಂಜೇಗೌಡ ಭಾಗವಹಿಸಿದ್ದರು.