ಕೂಡಿಗೆ, ಏ. ೧: ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ನಡೆದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಕಣಿವೆಯ ಎ. ಕೆ. ಬಾಯ್ಸ್ ತಂಡ ಪ್ರಥಮ ಸ್ಥಾನವನ್ನು ಗಳಿಸಿ ಟ್ರೋಫಿ, ಹಾಗೂ ನಗದು ಬಹುಮಾನ ಪಡೆದುಕೊಂಡಿತು.

ದ್ವಿತೀಯ ಸ್ಥಾನ ಎಂ.ಕೆ.ಟಿ. ರಾಮನಾಥಪುರ, ತೃತೀಯ ದೀಪಕ್ ಫ್ರೆಂಡ್ಸ್ ಬ್ಯಾಡಗೊಟ್ಟ, ಚತುರ್ಥ ಸ್ಥಾನ ಶನಿವಾರಸಂತೆ ತಂಡ ಪಡೆದುಕೊಂಡಿತು. ಪಂದ್ಯಾವಳಿಗೆ ಉದ್ಯಮಿ ಹಕ್ಕೆ ಮೋಹನ್ ಚಾಲನೆ ನೀಡಿ ನಂತರ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳು ಆಯೋಜನೆ ಮೂಲಕ ಯುವಕರು ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲು ಸಹಕಾರಿಯಾಗುವುದು, ಜೊತೆಯಲ್ಲಿ ಒಗ್ಗೂಡಿ ಗ್ರಾಮೀಣ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್ ಮಾತನಾಡಿ, ಕ್ರೀಡೆ ದೈಹಿಕ, ಮಾನಸಿಕ ಆರೋಗ್ಯ ಬೆಳವಣಿಗೆಯ ಮೂಲಕ ತನ್ನ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವುದು ಎಂದರು. ಕೆ.ಪಿ.ಸಿ.ಸಿ. ಸದಸ್ಯ ಹೆಬ್ಬಾಲೆ ನಟೇಶ್ ಗೌಡ ಮಾತನಾಡಿ, ಯುವಕರು ಸಮಪರ್ಣಾ ಭಾವನೆ ಮೂಲಕ ಸೇವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಕ್ರೀಡೆ ಸೃಜನಶೀಲತೆ ಬೆಳಸಿ ಕ್ರಿಯಾತ್ಮಕವಾಗಿ ತಾಳ್ಮೆ, ಶಾಂತಿ, ಜೀವನಕ್ಕೆ ಪಾಠ ಕಲಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಸುರೇಶ್, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಮಾಧವ, ಸಮಿತಿ ಸದಸ್ಯರು ಸೇರಿದಂತೆ ಕ್ರೀಡಾಪಟುಗಳು ಹಾಜರಿದ್ದರು.