ಕೂಡಿಗೆ, ಏ. ೧: ಸೈನಿಕ ಶಾಲೆಗಳು, ರಾಷ್ಟಿçÃಯ ಮಿಲಿಟರಿ ಶಾಲೆಗಳು ಮತ್ತು ಆರ್‌ಐಎಂಸಿ ನಿರ್ದೇಶಕರಾದ ಕೆ.ವಿ. ಅಜಿತ್ ಅವರು ಕೂಡಿಗೆ ಸೈನಿಕ ಶಾಲೆಗೆ ಭೇಟಿ ನೀಡಿದರು. ಶಾಲೆಯ ಅಶ್ವದಳದಿಂದ ಮುಖ್ಯ ಅತಿಥಿಗಳನ್ನು ಸ್ವಾಗತಿಸಲಾಯಿತು. ನಂತರ ಮುಖ್ಯ ಅತಿಥಿಗಳು ಶಾಲೆಯ ಆವರಣದಲ್ಲಿದ್ದ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಮರ್ಪಿಸು ವುದರ ಮೂಲಕ ಗೌರವ ವಂದನೆ ಸಲ್ಲಿಸಿದರು. ಶಾಲೆಯ ಪರೇಡ್ ಮೈದಾನದಲ್ಲಿ ಅವರಿಗೆ ಗೌರವ ವಂದನೆ ಅರ್ಪಿಸಲಾಯಿತು. ಶಾಲೆಯ ಕುವೆಂಪು ವಿವಿದೊದ್ಧೇಶ ಸಭಾಂಗಣದಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಕೆ.ವಿ. ಅಜಿತ್ ಅವರು, ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆಗಳು, ಬೋರ್ಡ್ ಪರೀಕ್ಷಾ ಫಲಿತಾಂಶಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಸಾಧಿಸಿದ ಅಭೂತಪೂರ್ವ ಯಶಸ್ಸನ್ನು ಶ್ಲಾಘಿಸಿದರು. ಇದರೊಂದಿಗೆ ವಿದ್ಯಾರ್ಥಿಗಳು ಸಂಸ್ಥೆಯ ಮೂಲ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಮತ್ತು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಶ್ರಮಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು.
ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ತಲುಪುವಲ್ಲಿ ಯಾವುದೇ ಅವಕಾಶವನ್ನು ವ್ಯರ್ಥ ಮಾಡುವುದಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಕರ್ನಲ್ ಅಮರ್ ಜೀತ್ ಸಿಂಗ್ ಶಾಲೆಯಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾರ್ಯಗಳು ಮತ್ತು ಚಟುವಟಿಕೆಗಳ ಕುರಿತು ನಿರ್ದೇಶಕರಿಗೆ ಮಾಹಿತಿ ನೀಡಿದರು. ನಂತರ, ಮುಖ್ಯ ಅತಿಥಿಗಳು ಶಾಲಾ ಆವರಣದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು.
ಪ್ರಾಂಶುಪಾಲರು ವಿವಿಧ ಚಟುವಟಿಕೆಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರು, ಬೋಧಕ ವರ್ಗ, ಆಡಳಿತ ಮಂಡಳಿ ಸಿಬ್ಬಂದಿ ಮತ್ತು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.