ಸೋಮವಾರಪೇಟೆ,ಮೇ.೪: ನಿವೇಶನ ರಹಿತರಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ನೀಡಬೇಕೆಂದು ಆಗ್ರಹಿಸಿ ಕುಂಬೂರು ಗ್ರಾಮದಲ್ಲಿ ಮೊನ್ನೆ ರಾತ್ರಿಯಿಂದ ನಡೆಯುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ಬಹುಜನ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಮೊಣ್ಣಪ್ಪ ನೇತೃತ್ವದಲ್ಲಿ ಶನಿವಾರ ಸಂಜೆಯಿAದ ನಡೆಯುತ್ತಿರುವ ಆಹೋರಾತ್ರಿ ಪ್ರತಿಭಟನೆ, ಇಂದೂ ಸಹ ಮುಂದುವರೆಯಿತು.
ಅಧಿಕಾರಿಗಳ ಭರವಸೆಯ ಮಾತುಗಳಿಗೆ ಮಣಿಯದ ಪ್ರತಿಭಟನಾಕಾರರು, ನಿವೇಶನ ಪಡೆದೇ ಸಿದ್ಧ ಎಂಬ ಸಂಕಲ್ಪದೊAದಿಗೆ ಧರಣಿ ಆರಂಭಿಸಿದ್ದು, ಶೆಡ್ನಲ್ಲಿಯೇ ರಾತ್ರಿ ಕಳೆಯುತ್ತಿದ್ದಾರೆ.
ಸ್ಥಳದಲ್ಲಿಯೇ ಅಡುಗೆ ತಯಾರಿಸಿ, ಮಕ್ಕಳೊಂದಿಗೆ ಮೊಕ್ಕಾಂ ಹೂಡಿರುವ ನಿವೇಶನ ರಹಿತರು, ಈ ಹಿಂದೆ ಗರಗಂದೂರು ಹಾಗೂ ಕುಂಬೂರು ಗ್ರಾಮ ವ್ಯಾಪ್ತಿಯ ಸ.ನಂ. ೧೨೫/೧ರಲ್ಲಿ ನವಗ್ರಾಮಕ್ಕೆ ಕಾಯ್ದಿರಿಸಿರುವ ಜಾಗವನ್ನು ನಿವೇಶನ ರಹಿತರಿಗೆ ನೀಡಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ.
ಮೊನ್ನೆ ರಾತ್ರಿ ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ಕುಮಾರ್, ವಲಯ ಅರಣ್ಯಾಧಿಕಾರಿ ಶೈಲೇಂದ್ರಕುಮಾರ್ ಅವರುಗಳು ತೆರಳಿ ಪ್ರತಿಭಟನಾಕಾರರ ಮನವಿ ಆಲಿಸಿ ಸೂಕ್ತ ಕ್ರಮದ ಭರವಸೆ ನೀಡಿದರೂ ಸಹ ಒಪ್ಪದ ನಿವೇಶನ ರಹಿತರು, ಮೂರನೇ ದಿನದ ಧರಣಿಯನ್ನು ಪೂರೈಸಿ, ನಾಲ್ಕನೇ ದಿನಕ್ಕೆ ಮುಂದುವರೆಸಿದ್ದಾರೆ.
ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದು, ಆಶಾ ಕಾರ್ಯಕರ್ತೆಯರು ತೆರಳಿ ಪ್ರತಿಭಟನಾಕಾರರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಧರಣಿ ನಡೆಯುತ್ತಿರುವ ಪಕ್ಕದ ಸ.ನಂ ೪೦/೧ರಲ್ಲಿ ೪೬ ಎಕರೆ ಪೈಸಾರಿ ಜಾಗವಿರುವ ಬಗ್ಗೆ ಆರ್ಟಿಸಿ ಲಭಿಸಿದ್ದು, ಆ ಜಾಗದಲ್ಲಿ ನಿವೇಶನ ರಹಿತ ಕಾರ್ಮಿಕರಿಗೆ ನಿವೇಶನ ನೀಡುವಂತೆ ಜಿಲ್ಲಾಧಿಕಾರಿ, ಕಂದಾಯ ಸಚಿವರನ್ನು ಒತ್ತಾಯಿಸಿದ್ದಾರೆ. ಈ ಪೈಸಾರಿ ಜಾಗವನ್ನು ಅನೇಕರು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚುವAತೆ ಸಂಬAಧಪಟ್ಟವರಿಗೆ ಮನವಿ ಪತ್ರ ನೀಡಲಾಗುವುದು ಎಂದು ಕಾರ್ಮಿಕ ಸಂಘಟನೆ ಅಧ್ಯಕ್ಷ ಕೆ.ಮೊಣ್ಣಪ್ಪ ತಿಳಿಸಿದ್ದಾರೆ.
ಸುಂಟಿಕೊಪ್ಪ ಮತ್ತು ಮಾದಾಪುರ ಪೊಲೀಸ್ ಸಿಬ್ಬಂದಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ. ಧರಣಿ ನಡೆಸುತ್ತಿರುವ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಎಸಿಎಫ್ ಗೋಪಾಲ್ ತಿಳಿಸಿದ್ದಾರೆ. ಧರಣಿಯಲ್ಲಿ ಶಿವಪ್ಪ, ಸೋಮು, ಪಿ.ಕೆ.ಅನಂದ, ಬಿ.ಆರ್. ಸುದೀಪ್, ದಿವ್ಯ, ರವಿ, ಅಣ್ಣು, ಗೀತಾಮಣಿ, ಗೀತಾ, ಸೇರಿದಂತೆ ಮಕ್ಕಳಾದಿಯಾಗಿ ಮಹಿಳೆಯರು ಭಾಗವಹಿಸಿದ್ದಾರೆ.