ಸಿದ್ದಾಪುರ, ಮೇ ೪: ಸ್ನಾನಕ್ಕೆ ತೆರಳಿದ ವ್ಯಕ್ತಿಯೋರ್ವರು ಕಾವೇರಿ ನದಿಯ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರದಂದು ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆಯ ಸುಂಕದಕಟ್ಟೆ ನಿವಾಸಿ ನಾಗರಾಜು (೪೧) ಎಂಬವರು ಮೃತ ದುರ್ದೈವಿ. ಮೃತ ನಾಗರಾಜು ತನ್ನೊಂದಿಗೆ ಕೆಲಸ ಮಾಡುತ್ತಿದ್ದ ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯ ನಿವಾಸಿ ಗಣೇಶ್ ಎಂಬವರೊAದಿಗೆ, ಸೋಮವಾರ ಮಧ್ಯಾಹ್ನ ಸ್ನಾನ ಮಾಡಲೆಂದು ಗುಹ್ಯ ಗ್ರಾಮದ ಕಾವೇರಿ ನದಿಗೆ ಬಂದಿದ್ದರು. ನಾಗರಾಜು ಹಾಗೂ ಗಣೇಶ ನದಿಯಲ್ಲಿ ಇಳಿದು ಸ್ನಾನ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನಾಗರಾಜು ನೀರಿನಲ್ಲಿ ಮುಳುಗಿದ್ದಾರೆ. ಈ ಸಂದರ್ಭ ಅವರೊಂದಿಗೆ ಇದ್ದ ಗಣೇಶ್ ಅಕ್ಕಪಕ್ಕದವರನ್ನು ಕರೆದು ರಕ್ಷಿಸಲು ಯತ್ನಿಸಿದರು ಎನ್ನಲಾಗಿದ್ದು, ಅಷ್ಟರಲ್ಲಾಗಲೇ ನಾಗರಾಜು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನಂತರ ಸ್ಥಳೀಯರ ನೆರವಿನಿಂದ ಪೊಲೀಸರ ಸಮ್ಮುಖದಲ್ಲಿ ನದಿಯಿಂದ ಮೃತದೇಹವನ್ನು ಹೊರತೆಗೆಯಲಾಯಿತು. ನಾಗರಾಜು ಮತ್ತು ಗಣೇಶ ಮರದ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.