ನಾಪೋಕ್ಲು, ಮೇ.೪: ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಲಮಾವಟಿ, ಪುಲಿಕೋಟು ಮತ್ತು ಪೇರೂರು ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದ್ದು ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ. ಸಮಸ್ಯೆಯನ್ನು ಕೂಡಲೆ ಸರಿಪಡಿಸಬೇಕು, ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಪುಲಿಕೋಟು ಗ್ರಾಮದ ಕಾಫಿ ಬೆಳೆಗಾರ ಮಣವಟ್ಟಿರ ದಯಾ ಚಿಣ್ಣಪ್ಪ ಎಚ್ಚರಿಸಿದ್ದಾರೆ.
ಪಟ್ಟಣದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ವರ್ಗದ ಜನರಿಗೆ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ವಿದ್ಯಾರ್ಥಿಗಳು, ಯುವಜನರು ಕೆಲಸ ನಿರ್ವಹಿಸಲು, ಓದಲು ಸಮಸ್ಯೆ ಯಾಗಿದೆ. ಬಲ್ಲಮಾವಟಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಇದೆ. ಇಲ್ಲೂ ಜನಸಾಮಾನ್ಯರು ದೈನಂದಿನ ವ್ಯವಹಾರಗಳಿಗೆ ನೆಟ್ವರ್ಕ್ ಇಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಪಡಿತರ ಪಡೆಯಲು ಸಹ ನೆಟ್‌ವರ್ಕ್ ಸಮಸ್ಯೆಯಿಂದಾಗಿ ತೊಂದರೆಯಾಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸಿ ಬಳಕೆದಾರರಿಗೆ ನೆಟ್‌ವರ್ಕ್ ಪೂರೈಸುವಲ್ಲಿ ಸಂಬAಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪೇರೂರು ಗ್ರಾಮದ ಕಾಫಿ ಬೆಳೆಗಾರ ತೋಲಂಡ ಪೂಣಚ್ಚ ಮಾತನಾಡಿ, ಗ್ರಾಮ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಲ್ಲಿ ಯಾವುದೇ ನೆಟ್‌ವರ್ಕ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಡಿಜಿಟಲ್ ವ್ಯವಸ್ಥೆ ಜನಸಾಮಾನ್ಯರಿಗೆ ತೀರಾ ಅವಶ್ಯಕವಾಗಿದ್ದು ನೆಟ್ವರ್ಕ್ ಇಲ್ಲದೆ ಬಳಕೆದಾರರು ಪರಿತಪಿಸುವಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲು ಶಾಸಕರು ಹಾಗೂ ಸಂಸದರು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ದೊಡ್ಡಪುಲಿಕೋಟು ಗ್ರಾಮದ ಕಾಫಿ ಬೆಳೆಗಾರರಾದ ಮಣವಟ್ಟಿರ ಹರೀಶ್ ಸುಬ್ಬಯ್ಯ, ಮಣವಟ್ಟೀರ ಹ್ಯಾರಿ ಕರುಂಬಯ್ಯ ಇದ್ದರು.